ಹಾಸನ: ಬೆಳ್ಳಂಬೆಳಗ್ಗೆಯೇ ಚಿರತೆ ಮರಿಯೊಂದು ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಸಮೀಪದ ಗೋಹಳ್ಳಿ ಕ್ರಾಸ್ನ ಭತ್ತದ ಗದ್ದೆಯಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡು ಗ್ರಾಮದ ಜನರ ನಿದ್ದೆಗೆಡಿಸಿದೆ. ಹಳ್ಳಿ ಮೈಸೂರು ಮಾರ್ಗವಾಗಿ ಸಾಲಿಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಗೋಹಳ್ಳಿ ಕ್ರಾಸ್ ಬಳಿಯಿರುವ ಗುರುಮೂರ್ತಿ ಎಂಬುವರ ಭತ್ತದ ಗದ್ದೆಯಲ್ಲಿ ಸುಮಾರು 9:30ಕ್ಕೆ ಚಿರತೆ ಮರಿ ಪತ್ತೆಯಾಗಿದೆ.ಎಂದಿನಂತೆ ಜಾನುವಾರು ಮೇಯಿಸಲು ಹೋದಾಗ ಚಿರತೆ ಕಾಣಸಿಕೊಂಡಿದೆ. ಭತ್ತದ ಗದ್ದೆಗೆ ನೀರು ಬಿಡಲು ಮುಂದಾದಾಗ, ಭತ್ತದ ಪೈರಿನ ಮಧ್ಯೆಯಿದ್ದ ಚಿರತೆ ಮರಿ ಗುರುಮೂರ್ತಿಯವರನ್ನು ಕಂಡು ಜಿಂಕೆ ಮರಿಯಂತೆ ಚಂಗನೆ ನೆಗೆದು ಓಡಿಹೋಗಿದೆ. ಇದನ್ನು ಜೊತೆಯಲ್ಲಿದ್ದ ಧರ್ಮ ಎಂಬವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ."ನಮ್ಮ ಭಾಗದಲ್ಲಿ ಮೊದಲ ಬಾರಿಗೆ ಚಿರತೆ ಮರಿ ಕಾಣಿಸಿದೆ. ಬಹುಶಃ ಚಿರತೆ ತನ್ನ ಮರಿಗಳೊಂದಿಗೆ ಅಕ್ಕ ಪಕ್ಕದಲ್ಲಿ ವಾಸವಿರಬಹುದು ಎಂಬ ಅನುಮಾನ ಮೂಡಿದೆ. ನಮಗೆ ಒಂದು ಚಿರತೆ ಮರಿ ಕಾಣಿಸಿದ್ದು, ನಮ್ಮ ಗ್ರಾಮದ ಸರಹದ್ದಿನಲ್ಲಿಯೇ ಚಿರತೆ ಓಡಾಟ ನಡೆಸುತ್ತಿರುಬಹುದು. 5-6 ತಿಂಗಳ ಮರಿ ಇರಬಹುದು. ಕೂಡಲೇ ಅರಣ್ಯ ಇಲಾಖೆಯವರು ಬೋನ್ ಇಟ್ಟು ಚಿರತೆಯನ್ನು ಸೆರೆಯಿಡಿದು ಸಂರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ರೈತರು ಭಯದ ವಾತಾವರಣದಲ್ಲಿಯೇ ಕೃಷಿ ಚಟುವಟಿಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿ ಮುಂದಾಗುವ ಅನಾಹುತಕ್ಕೂ ಅರಣ್ಯ ಇಲಾಖೆಯವರೇ ಹೊಣೆಗಾರರಾಗುತ್ತಾರೆ" ಎಂದು ಸ್ಥಳೀಯರಾದ ಧರ್ಮ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ: ಅಂತೂ ಇಂತೂ ಚಿರತೆ ಬೋನಿಗೆ ಬಿತ್ತು
Be the first to comment