ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಣತೂರ ಗ್ರಾಮದಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಯ ನಡುವೆ, ರಣತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಗೊಬ್ಬರ ವಿತರಣೆ ಕಾರ್ಯ ನಡೆಯಿತು. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೊಬ್ಬರ ವಿತರಣೆಯನ್ನು ನಿರ್ವಹಿಸಿದರು.ನೂರಾರು ರೈತರು ಗೊಬ್ಬರ ಪಡೆಯಲು ಸಂಘದ ಆವರಣದಲ್ಲಿ ಜಮಾಯಿಸಿದ್ದರಿಂದ, ಗೊಂದಲ ತಪ್ಪಿಸಲು ಪೊಲೀಸ್ ಕಾವಲಿನಲ್ಲಿ ವಿತರಣೆ ಕಾರ್ಯ ನಡೆಸಲಾಯಿತು. ಶಾಸಕ ಲಮಾಣಿ ಸ್ವತಃ ಕೌಂಟರ್‌ನಲ್ಲಿ ಕುಳಿತು ರೈತರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ, ಯೂರಿಯಾ ಗೊಬ್ಬರವನ್ನು ಹಂಚಿಕೆ ಮಾಡಿದರು. ಈ ಹಿಂದೆ ಗೊಬ್ಬರ ವಿತರಣೆ ವೇಳೆ ಗಲಾಟೆಯಾಗಿದ್ದ ಹಿನ್ನೆಲೆ ಈ ಬಾರಿ ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಕಾರ್ಯ ನಡೆಯಿತು.ಈ ಬಗ್ಗೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, "ರಾಜ್ಯ ಸರ್ಕಾರವು ರೈತರಿಗೆ ನಿಗದಿತ ಸಮಯದಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಗೊಬ್ಬರದ ಅಭಾವವು ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕೂಡಲೇ ಸಮರ್ಪಕವಾಗಿ ಯೂರಿಯಾ ವಿತರಣೆ ಮಾಡುವಂತೆ" ಅವರು ಒತ್ತಾಯಿಸಿದ್ದಾರೆ. ರಣತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ರೈತರ ಸಮಸ್ಯೆಗಳನ್ನು ಆಲಿಸಿ, ಗೊಬ್ಬರ ಪೂರೈಕೆಯನ್ನು ಸುಗಮಗೊಳಿಸಲು ತಮ್ಮಿಂದ ಆಗುವ ಎಲ್ಲ ಪ್ರಯತ್ನಗಳನ್ನು ಮಾಡುವ ಭರವಸೆ ನೀಡಿದರು. ಜಿಲ್ಲೆಯ ರೈತರಿಗೆ ಗೊಬ್ಬರದ ಕೊರತೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯಾದ್ಯಂತ ಗೊಬ್ಬರದ ಕೊರತೆ ತೀವ್ರವಾಗಿದ್ದು, ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ''ಗೋವಿನ ಜೋಳದ ಬಿತ್ತನೆ ಪ್ರಮಾಣ ಈ ಬಾರಿ ಈ ಪ್ರದೇಶದಲ್ಲಿ ಹೆಚ್ಚಾಗಿದ್ದರಿಂದ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ವಾಗಿದೆ. ರಾತ್ರಿ ಹಗಲು ಎನ್ನದೆ ಸರತಿಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ. ಅಲ್ಲದೇ, ಕೃಷಿ ಇಲಾಖೆ ದಾಸ್ತಾನು ಕಡಿಮೆ ಮಾಡಿಕೊಂಡಿದ್ದರಿಂದ ಗೊಬ್ಬರಕ್ಕೆ ಹಾಹಾಕಾರ ಉಂಟಾಗಿದೆ. ಒಂದು ಎಕರೆ ಗೋವಿನಜೊಳ ಬೆಳೆಯಲು 15 ರಿಂದ 20 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಇಷ್ಟು ದಿನ ಮಳೆ ಇರದೆ ಬೆಳೆ ಬಾಡುವ ಹಂತಕ್ಕೆ ಹೋಗಿದ್ದವು. ಆದರೆ, ಈಗ ಒಂದು ವಾರದಿಂದ ಭರ್ಜರಿ ಮಳೆಯಾಗಿದ್ದು, ತೇವಾಂಶ ಹೆಚ್ಚಾಗಿದೆ. ಗೋವಿನ ಜೋಳ ರೋಗಕ್ಕೆ ತುತ್ತಾಗು ಆತಂಕ ಎದುರಾಗಿದೆ. ಜರೂರು ಯೂರಿಯಾ ಗೊಬ್ಬರ ಹಾಕಿದ್ದಲ್ಲಿ ಬೆಳೆ ಸಮೃದ್ಧವಾಗಿ ಬರುತ್ತದೆ. ಆದರೆ, ಯೂರಿಯಾ ಗೊಬ್ಬರ ಮಾತ್ರ ಸಿಗ್ತಾಯಿಲ್ಲ. ಹೀಗಾಗಿ ಅನ್ನದಾತರು ಗೊಬ್ಬರಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Be the first to comment