ಬೆಂಗಳೂರು: ನಿರ್ಜನ ರಸ್ತೆಯೊಂದರಲ್ಲಿ ಸ್ಕೂಟರ್ ಸವಾರನನ್ನು ಅಡ್ಡಗಟ್ಟಿ ಸುಲಿಗೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೆಂಬರ್ 15ರಂದು ಶಾಂತಿನಗರ ಸಮೀಪದ ಚರ್ಚ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗ್ಗಿನ ಜಾವ 4:30ರ ಸುಮಾರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸವಾರನನ್ನು ಮತ್ತೊಂದು ಸ್ಕೂಟರ್‌ನಲ್ಲಿ ಬಂದ ಮೂವರು ಅಡ್ಡಗಟ್ಟಿದ್ದಾರೆ. ಈ ಪೈಕಿ ಇಬ್ಬರು ಇಳಿದು ಸ್ಕೂಟರ್ ಸವಾರನ ಬಳಿಯಿದ್ದ ಹಣ, ಮೊಬೈಲ್ ಫೋನ್ ದೋಚಲು ಯತ್ನಿಸಿದ್ದಾರೆ. ಆದರೆ ಸ್ಕೂಟರ್ ಸವಾರ ಧೈರ್ಯದಿಂದ ಪ್ರತಿರೋಧವೊಡ್ಡಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮಾರಕಾಸ್ತ್ರ ಪ್ರದರ್ಶಿಸಿ ಸುಲಿಗೆ ಯತ್ನ(ಪ್ರತ್ಯೇಕ ಘಟನೆ): ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿರುವ ಘಟನೆ ಯಶವಂತಪುರ ರೈಲ್ವೇ ನಿಲ್ದಾಣದ ಬಳಿಯೂ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಕಿಡಿಗೇಡಿಗಳು ನಸುಕಿನ ಜಾವ ಫುಟ್‌ಪಾತ್ ಮೇಲೆ ಹೋಗುತ್ತಿದ್ದವನಿಗೆ ಮಚ್ಚು ತೋರಿಸಿ, 100 ರೂಪಾಯಿ ಹಣ ಕೇಳಿದ್ದಾರೆ. ಕೊಡದಿದ್ದರೆ ಮಚ್ಚಿನಿಂದ ಹಲ್ಲೆ ಮಾಡುವುದಾಗಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಸಾಗುತ್ತಿದ್ದ ಮತ್ತೋರ್ವ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿ ಮಚ್ಚು ಬೀಸಿದ್ದಾರೆ. ಕೂಡಲೇ 'ಪೊಲೀಸ್ ಪೊಲೀಸ್' ಎಂದು ಕೂಗಿಕೊಂಡಾಗ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.ಇದನ್ನೂ ಓದಿ: ನಾಯಿಯನ್ನು ಮುದ್ದಿಸುವ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ದುರುಳ
Be the first to comment