ಹಾವೇರಿ: ರಾಣೆಬೆನ್ನೂರಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಜನರು ತೀವ್ರ ತೊಂದರೆ ಎದುರಿಸಬೇಕಾಯಿತು. ದೀಪಾವಳಿಯ ಬಲಿಪಾಡ್ಯಮಿ ಸಿದ್ದತೆಯಲ್ಲಿದ್ದ ಜನರಿಗೆ ಮಳೆರಾಯ ಅಡ್ಡಿ ತಂದಿದ್ದು, ಮಳೆಯ ಆರ್ಭಟಕ್ಕೆ ರಾಣೆಬೆನ್ನೂರು ನಗರ ತತ್ತರಗೊಂಡಿದೆ. ದೀಪಾವಳಿ ಹಬ್ಬಕ್ಕೆಂದು ಬಾಳೆದಿಂಡು, ಹೂವು, ಹಣ್ಣುಗಳನ್ನು ಖರೀದಿಸಲು ಮಾರುಕಟ್ಟಗೆ ಬಂದಿದ್ದ ಜನರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು. ಅರ್ಧ ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ದುರ್ಗಾ ವೃತ್ತ ನೀರಿನಿಂದ ಜಲಾವೃತಗೊಂಡಿತು. ಬೀದಿ ಬದಿ ವ್ಯಾಪಾರಸ್ಥರು, ಗ್ರಾಹಕರು, ಬೈಕ್ ಸವಾರರು ಮಳೆ ನೀರಿನಿಂದ ರಕ್ಷಣೆ ಮಾಡಿಕೊಳ್ಳಲು ಓಡಾಡತೊಡಗಿದರು. ಮಳೆಯಿಂದ ಜನ ತರಾತುರಿಯಲ್ಲಿ ಖರೀದಿ ಮಾಡಿ ಮನೆಗೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಭಸವಾಗಿ ಸುರಿದ ಮಳೆಯಿಂದ ಕುಂಬಳಕಾಯಿ, ಬಾಳೆ ದಿಂಡು, ತಳಿರು ತೋರಣ ಸೇರಿದಂತೆ ಹಬ್ಬಕ್ಕೆ ಮಾರಾಟ ಮಾಡಲು ತಂದಿದ್ದ ವಿವಿಧ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಚರಂಡಿ ನೀರು ರಸ್ತೆಯ ಮೇಲೆ ಹರಿದು ದುರ್ನಾತ ಬೀರಿದ ಪರಿಣಾಮ ಜನರು ಮೂಗುಮುಚ್ಚಿಕೊಂಡು ಓಡಾಡಿದರು. ಬಳ್ಳಾರಿ ಜಿಲ್ಲೆಯ ವಿವಿಧೆಡೆಯೂ ಭಾರಿ ಮಳೆ: ಬಳ್ಳಾರಿಯ ಸಿರಗುಪ್ಪ ಸಿರಿಗೇರಿ ಗ್ರಾಮದಲ್ಲಿಯೂ ಇಂದಿನ ಮಳೆ ಭಾರಿ ಅವಾಂತರ ಸೃಷ್ಟಿಸಿತು. ಒಂದೇ ಗಂಟೆ ಸುರಿದ ಮಳೆಗೆ ಇಡೀ ಗ್ರಾಮ ಕೆರೆಯಂತಾಯಿತು. ಗ್ರಾಮದ ಮೂರನೇ ವಾರ್ಡ್ನಲ್ಲಿ ಸೊಂಟದವರೆಗೂ ನೀರು ಬಂದು ನಿಂತಿದ್ದು, ಜನರು ಪರದಾಡುಂತಾಗಿದೆ. ಹಲವು ಮನೆಗಳ ಒಳಗಡೆ ನೀರು ಹೋಗಿ ಅವಾಂತರ ಸೃಷ್ಟಿಯಾಗಿದ್ದು, ಸ್ಥಳೀಯ ಆಡಳಿತ ಮತ್ತು ಪಂಚಾಯತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ; 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
Be the first to comment