ಹಾವೇರಿ: ಕಟ್ಟಿಗೆ ಕಡಿಯುವ ವ್ಯಕ್ತಿ ಬಾವಿಯಲ್ಲಿ ಕೊಡಲಿ ಕಳೆದುಕೊಂಡು ಕೊಡಲಿಗಾಗಿ ದೇವರಲ್ಲಿ ಪ್ರಾರ್ಥಿಸಿ ಚಿನ್ನದ ಕೊಡಲಿ, ಬೆಳ್ಳಿಯ ಕೊಡಲಿ ನಿರಾಕರಿಸಿ ಕಬ್ಬಿಣದ ಕೊಡಲಿ ಪಡೆದು ಪ್ರಾಮಾಣಿಕತೆ ಮೆರೆದ ಕಥೆ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹಾವೇರಿ ಜಿಲ್ಲೆಯಲ್ಲಿ ಕೊಡಲಿಗಾಗಿ ವಯೋವೃದ್ಧನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.ಹೌದು, ಕಟ್ಟಿಗೆ ಕಡಿಯಲು ಕೊಡಲಿ ಪಡೆದುಕೊಂಡಿದ್ದ ವ್ಯಕ್ತಿಯೋರ್ವ ವಾಪಸ್ ತನಗೆ ನೀಡುತ್ತಿಲ್ಲ, ಕೊಡಲಿ ಕೊಡಿಸಿ ಎಂದು ವಯೋವೃದ್ಧ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪಕ್ಕದ ಮನೆಯ ವ್ಯಕ್ತಿ ಕೊಡಲಿ ತೆಗೆದುಕೊಂಡು ಹೋಗಿ ಕೇಳಿದರೂ ಕೊಡುತ್ತಿಲ್ಲ ಎಂದು ಠಾಣೆಗೆ ಬಂದ ವೃದ್ಧ ದೂರಿದ್ದಾರೆ.ರಾಣೆಬೆನ್ನೂರು ತಾಲೂಕಿನ ಗುಡಗೂರು ಗ್ರಾಮದ 70 ವರ್ಷದ ವೃದ್ಧ ಕೊಡಲಿ ಕೊಡಿಸುವಂತೆ ಪೊಲೀಸ್ ಠಾಣೆಗೆ ತೆರಳಿದವರು. ಠಾಣೆಯ ಹೆಡ್ ಕಾನ್ಸಸ್ಟೇಬಲ್ ಹಾಲೇಶ ಮೇಗಳಮನಿ ಅವರು ಆ ಅಜ್ಜನ ಮುಗ್ಧತೆ ನೋಡಿ ಅವರನ್ನು ಸಮಾಧಾನದಿಂದ ಮಾತನಾಡಿಸಿ, ವಿಚಾರವನ್ನು ತಿಳಿದುಕೊಂಡರು.ಕೊಡಲಿ ತೆಗೆದುಕೊಂಡ ವ್ಯಕ್ತಿಯ ಮಾಹಿತಿ ಪಡೆದ ಕಾನ್ಸಸ್ಟೇಬಲ್ ಹಾಲೇಶ್ ಅವರು ಗ್ರಾಮದ ಮುಖಂಡರ ಜೊತೆಗೆ ಮಾತನಾಡಿಸಿ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಕೊಡಲಿ ಪಡೆದ ವ್ಯಕ್ತಿಯೊಂದಿಗೆ ಫೋನ್ ನಲ್ಲಿ ಮಾತನಾಡಿ ಅದನ್ನು ಬಡಪಾಯಿ ವೃದ್ಧನಿಗೆ ಹಿಂದಿರುಗಿಸುವಂತೆ ತಿಳಿಹೇಳಿದರು. ಆ ವ್ಯಕ್ತಿ ಕೂಡ ಕೊಡಲಿಯನ್ನು ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ.ಕೊಡಲಿಯಿಂದ ಸಣ್ಣಪುಟ್ಟ ಕಟ್ಟಿಗೆ ಕಡಿದು ಉಪಜೀವನ ಮಾಡುವ ವಯೋವೃದ್ಧನ ಮುಗ್ಧತೆಗೆ ಠಾಣೆಯ ಸಿಬ್ಬಂದಿ ಮರುಗಿದ್ದಾರೆ. ವಯೋವೃದ್ಧನಿಗೆ ನೀರು, ಬಿಸ್ಕತ್, ಟೀ ಕೊಡಿಸಿ, ಸ್ಟೇಷನ್ ನಿಂದ ಪೋಸ್ಟ್ ಸರ್ಕಲ್ ವರೆಗೆ ಪೊಲೀಸ್ ಸಿಬ್ಬಂದಿಯೇ ಆಟೋದಲ್ಲಿ ಕಳಿಸಿದ್ದಾರೆ.ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಗುಡಗೂರು ಗ್ರಾಮ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ್ ಹಾಗೂ ರಾಣೆಬೆನ್ನೂರು ಹಾಲಿ ಶಾಸಕ ಪ್ರಕಾಶ್ ಕೋಳಿವಾಡ ಅವರ ಸ್ವಗ್ರಾಮವಾಗಿದೆ. ಇದನ್ನೂ ಓದಿ: ಹಾವೇರಿ: ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪನವರ ಸಮಾಧಿ ಕಾಯಕಲ್ಪ ಮರೆತ ಸರ್ಕಾರ
Be the first to comment