ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದಲ್ಲಿ ಕೊಚ್ಚಿ ಹೋದ ವ್ಯಕ್ತಿ ಗಿಡಗಂಟಿ ಹಿಡಿದು ಅದೃಷ್ಟವಶಾತ್ ಪಾರಾಗಿದ್ದಾನೆ. ವ್ಯಕ್ತಿ ಕಣ್ಣೆದುರೇ ಕೊಚ್ಚಿ ಹೋಗುವ ಹಾಗೂ ಆತನ ರಕ್ಷಣೆಯ ದೃಶ್ಯ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ಘಟನೆ ಮೈ ಜುಮ್ಮೆನ್ನಿಸುವಂತಿದೆ. ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯ ಕೋಡಿಬಿದ್ದ ಹಿನ್ನೆಲೆ ವೀಕ್ಷಣೆಗೆ ಉಳಿದ ಪ್ರವಾಸಿಗರಂತೆ ಈ ವ್ಯಕ್ತಿಯೂ ಬಂದಿದ್ದ. ಎಚ್ಚರಿಕೆಯ ಬೋರ್ಡ್ ಅಳವಡಿಸಲಾಗಿದ್ದರೂ ಕ್ಯಾರೇ ಎನ್ನದೇ ಈತ ನೀರಿಗಿಳಿದು ಹುಚ್ಚಾಟ ಮಾಡಿದ್ದಾನೆ. ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದುವುದರಿಂದ ನೀರಿನ ಹರಿವಿನ ವೇಗ ದುಪ್ಪಟ್ಟಾಗಿದೆ. ಇಂತಹ ಸಂದರ್ಭದಲ್ಲಿ ನೀರಿಗೆ ಇಳಿದ ವ್ಯಕ್ತಿ ನೋಡನೋಡುತ್ತಿದ್ದಂತೆ ಕೊಚ್ಚಿ ಹೋದನು. ಮುಂದೆ ಹರಿದು ಹೋದ ಆತ ಗಿಡಗಂಟಿ ಹಿಡಿದುಕೊಂಡು ಸಿಲುಕಿದ್ದ. ಕೊಚ್ಚಿಕೊಂಡು ಹೋಗುವುದನ್ನು ಕಂಡಿದ್ದ ಸ್ಥಳೀಯರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಸಿಲುಕಿದ್ದಲ್ಲಿಗೆ ಹಗ್ಗ ನೀಡಿ ಅದರ ಸಹಾಯದಿಂದ ಮತ್ತೋರ್ವ ನೀರಿನ ಮಧ್ಯಕ್ಕೆ ತೆರಳಿ ಆತನನ್ನು ದಡಕ್ಕೆ ತಂದಿದ್ದಾರೆ. ವ್ಯಕ್ತಿಗೆ ಹೋದ ಜೀವ ಮತ್ತೆ ಬಂದಾಂತಾಗಿದೆ. ಘಟನೆ ಬಳಿಕ ಮತ್ತಷ್ಟು ಕಟ್ಟೆಚ್ಚರವಹಿಸಿರುವ ಚಿತ್ರದುರ್ಗ ಜಿಲ್ಲಾಡಳಿತ ನೀರಿಗಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡ : ಅಪಾಯಕ್ಕೆ ಸಿಲುಕಿದ್ದ 31 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
Be the first to comment