ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಲ್ಲಿನ ಕೃಷ್ಣಮಠದಲ್ಲಿ ಇಂದು ವಿಟ್ಲಪಿಂಡಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಹಾಪೂಜೆಗೂ ಮುನ್ನ ಗರ್ಭಗುಡಿಯಲ್ಲಿ ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಿದರು. ಮಧ್ಯಾಹ್ನ 3 ಗಂಟೆಯ ಬಳಿಕ ಮೃಣ್ಮಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ, ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯ ಭಕ್ತರು ಇದಕ್ಕೆ ಸಾಕ್ಷಿಯಾದರು. ದೇವರ ಮೆರವಣಿಗೆಯ ನಡುವೆ ಪುತ್ತಿಗೆ ಶ್ರೀಗಳು ರಥ ಬೀದಿಯಲ್ಲಿ ಭಕ್ತರತ್ತ ಪ್ರಸಾದ ರೂಪದಲ್ಲಿ ಉಂಡೆ ಚಕ್ಕುಲಿಗಳನ್ನು ಎಸೆದರು.ಮೆರವಣಿಗೆಯ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು. ಈ ವೇಳೆ ಹುಲಿವೇಷಗಳ ಅಬ್ಬರದ ಕುಣಿತ ಪ್ರದರ್ಶನ ನಡೆಯಿತು.ಸಾಂಪ್ರದಾಯಿಕ ಗೊಲ್ಲವೇಷಧಾರಿಗಳು ಕೃಷ್ಣಮಠದ ಮುಂಭಾಗ ಮೊಸರು ಗಡಿಗೆಗಳನ್ನು ಒಡೆಯುವುದು ವಿಟ್ಲಪಿಂಡಿಯ ಪ್ರಧಾನ ಸಂಪ್ರದಾಯ. ಅದರಂತೆ ಗೊಲ್ಲ ವೇಷಧಾರಿಗಳು ನಾಮುಂದು ತಾಮುಂದು ಎಂಬಂತೆ ಮೊಸರು ಗಡಿಗೆಗಳನ್ನು ಒಡೆದು ಸಂಭ್ರಮಿಸಿದರು. ಬಳಿಕ ನಡೆದ ರಥೋತ್ಸವದಲ್ಲಿ ವಿವಿಧ ವೇಷಧಾರಿಗಳು ಉತ್ಸವಕ್ಕೆ ಮೆರುಗು ನೀಡಿದರು. ಕಲಾವಿದರು ಆರ್ಸಿಬಿ ಜರ್ಸಿ ಧರಿಸಿ ಕಪ್ ಗೆದ್ದ ಘಟನೆಯಂತೆ ಸಂಭ್ರಮಿಸಿದರು. ವಿಶೇಷವೆಂದ್ರೆ ಈ ವೇಳೆ ಆರ್ಸಿಬಿ ಆಟಗಾರರನ್ನು ಹೋಲುವಂತೆ ಕಲಾವಿದರು ಪೋಷಾಕು ಧರಿಸಿ ಗಮನ ಸೆಳೆದರು. ಇದನ್ನೂ ಓದಿ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಗಣೇಶನಿಗೆ ಅದ್ಧೂರಿ ಮೆರವಣಿಗೆ: ಕೈಕೈ ಹಿಡಿದು ಕುಣಿದು ಕುಪ್ಪಳಿಸಿ ಗಣಪನ ನಿಮಜ್ಜನ
Be the first to comment