ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ತಮ್ಮ ಹೆಸರಿನ ಮುಂದೆ ತಮ್ಮ ತಂದೆ ಹೆಸರನ್ನು ಹಾಕಿಕೊಂಡಾಕ್ಷಣ ಬಂಗಾರಪ್ಪನವರ ನಡತೆ, ಯೋಗ್ಯತೆ, ಮಾತು ಬರಬೇಕು. ನಾನು ಇದರ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಸಚಿವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಳೆದ ವಾರ ಸಚಿವ ಮಧು ಬಂಗಾರಪ್ಪ ತೀರ್ಥಹಳ್ಳಿ ಪ್ರವಾಸದ ವೇಳೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ತಮ್ಮನ್ನು ಬಚ್ಚಾ ಎಂದು ಕರೆದಿದ್ದಕ್ಕೆ ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ನಾವು ರಾಜಕೀಯಕ್ಕೆ ಬಚ್ಚಾ ಆಗಿಯೇ ಬಂದಿದ್ದೇವೆ. ರಾಜಕೀಯಕ್ಕೆ ಬಹಳ ಕಷ್ಟಪಟ್ಟು, ಸೊನ್ನೆಯಿಂದ ಈತನಕ ಬಂದಿರುವೆ. ಆದರೆ, ಮಧು ಬಂಗಾರಪ್ಪನವರು ಹುಟ್ಟುವಾಗಲೇ ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರು. ಅವರ ರಕ್ತದಲ್ಲಿಯೇ ರಾಜಕಾರಣ ಇದೆ. ಅವರು ನನಗಿಂತ ಚೆನ್ನಾಗಿ ಮಾತನಾಡಬೇಕಿತ್ತು. ಒಂದು ಅಂತಸ್ತಿನಲ್ಲಿ ಮಾತನಾಡಬೇಕಿತ್ತು. ನಾನಿದನ್ನು ಜನರಿಗೆ ಬಿಡುತ್ತೇನೆ. ಅವರು ತಂದೆಯ ಹೆಸರನ್ನು ಜೊತೆಗಿಟ್ಟುಕೊಂಡಿದ್ದಾರೆ. ಅವರ ತಂದೆಯ ಯೋಗ್ಯತೆ ಬರಲಿ ಅಂತ ಹಾರೈಸುವೆ. ಅವರ ತಂದೆ ರಾಜಕಾರಣದಲ್ಲಿ ತಮ್ಮ ಎದುರಾಳಿಗೂ ಗೌರವ ಕೂಡುತ್ತಿದ್ದರು. ಇವೆಲ್ಲ ಮಧು ಬಂಗಾರಪ್ಪ ಕಲಿಯಲೇ ಇಲ್ಲ ಎಂಬುದು ಬೇಸರ ಎಂದರು. ನಾನಂತೂ ದ್ವೇಷ ಮಾಡಲ್ಲ. ನನ್ನ ತಾಲೂಕಿಗೆ ಒಬ್ಬ ಮಂತ್ರಿ ಬರುತ್ತಾರೆಂದರೆ ಶಾಸಕನಾಗಿ ಗೌರವ ಕೊಡಬೇಕು. ಕ್ಷೇತ್ರದ ಸಮಸ್ಯೆ ಹೇಳಬೇಕು. ನಾನು ಕೂಡ ಮಂತ್ರಿಯಾದವನು. ಚಿಕ್ಕಮಗಳೂರು, ತುಮಕೂರು ಜಿಲ್ಲಾ ಉಸ್ತುವಾರಿ ವಹಿಸಿದ್ದೆ. ರಾಜಕಾರಣದಲ್ಲಿ ಒಂದು ಅಂತಸ್ತು ಕಾಪಾಡಿಕೊಳ್ಳಬೇಕೇ ಹೊರತು ತೀರ ಕೆಳಮಟ್ಟಕ್ಕೆ ಇಳಿಯಬಾರದು. ಯಾರನ್ನೂ ಸಣ್ಣದಾಗಿ ಮಾಡುವ ಮೂಲಕ ನಾನು ದೊಡ್ಡವನಾಗಬೇಕೆಂದು ನಾನಂತೂ ರಾಜಕಾರಣದಲ್ಲಿ ತಿಳಿದುಕೊಂಡವನಲ್ಲ. ರಾಜಕೀಯದ ಮೊದಲು ಮಾತನಾಡಿರುವೆ. ಆದರೆ, ನಂತರ ಹೀಗೆ ನಡೆದುಕೊಂಡಿಲ್ಲ ಎಂದರು.ಇದನ್ನೂ ಓದಿ: ಶಿವಮೊಗ್ಗದಲ್ಲಿ ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡುವುದಿಲ್ಲ, ಕಾನೂನೇ ಗೆಲ್ಲಬೇಕು : ಸಚಿವ ಮಧು ಬಂಗಾರಪ್ಪ
Be the first to comment