ಚಾಮರಾಜನಗರ: ಕಳೆದ ಹಲವು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿಯಲ್ಲಿ ಇಂದು ಬೆಳಗಿನ ಹೊತ್ತಲ್ಲಿ ಚಿರತೆ ಬೋನು ಸೇರಿತು.ಸೆರೆಯಾದ ಗಂಡು ಚಿರತೆಗೆ 4-5 ವರ್ಷಗಳಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೇರಂಬಾಡಿ ಗ್ರಾಮದ ಶಿವಶಂಕರಪ್ಪ ಎಂಬವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನಿರಿಸಲಾಗಿತ್ತು. ಮೇಕೆ ಆಸೆಯಿಂದ ಬಂದ ಅದು ಬೋನಿನಲ್ಲಿ ಸೆರೆಯಾಗಿದೆ. ಬೇರಂಬಾಡಿ ಸುತ್ತಮುತ್ತಲು ಚಿರತೆ ಉಪಟಳ ಕೊಡುತ್ತಿತ್ತು. ಕೆಲವು ದಿನಗಳ ಹಿಂದೆಯೂ ಮೂರು ಕುರಿಗಳು ಚಿರತೆಗೆ ಆಹಾರವಾಗಿದ್ದವು. "ಈ ಚಿರತೆಯನ್ನು ಬಂಡೀಪುರ ಅಭಯಾರಣ್ಯದ ಕಲ್ಕೆರೆ ಪ್ರದೇಶದ ದಟ್ಟಾರಣ್ಯದಲ್ಲಿ ಬಿಡಲಾಗುವುದು. ಕಳೆದ ಹಲವು ದಿನಗಳಿಂದ ರೈತರಿಗೆ ಉಪಟಳ ನೀಡುತ್ತಿದ್ದ ಕಾರಣ ಬೋನಿರಿಸಿದ್ದೆವು" ಎಂದು ಆರ್ಎಫ್ಒ ಪುನೀತ್ ತಿಳಿಸಿದರು. ಮದ್ದೂರು ವಲಯದ ಅರಣ್ಯಾಧಿಕಾರಿಗಳು ಶಿವಶಂಕರಪ್ಪ ಎಂಬ ರೈತರ ಜಮೀನಿನಲ್ಲಿ ಬೋನಿರಿಸಿ ಒಳಗೆ ಮೇಕೆ ಕಟ್ಟಿದ್ದರು. ಇದೀಗ ಚಿರತೆ ಬೋನಿಗೆ ಬಿದ್ದಿರುವುದರಿಂದ ರೈತರ ಆತಂಕ ದೂರವಾಗಿದೆ. ಇದೇ ವೇಳೆ, ಕಾಡುಪ್ರಾಣಿಗಳು ನಾಡಿಗೆ ಬರದಂತೆ ಕ್ರಮ ವಹಿಸಬೇಕು ಎಂಬುದು ಸ್ಥಳೀಯ ರೈತ ಮುಖಂಡರ ಒತ್ತಾಯ.ಇದನ್ನೂ ನೋಡಿ: ಬನ್ನೇರುಘಟ್ಟ ಸಫಾರಿ ವೀಕ್ಷಣೆ ವೇಳೆ ಚಿರತೆ ದಾಳಿ: ಮಹಿಳೆಯ ಕೈಗೆ ಗಾಯ; ಆತಂಕಗೊಂಡ ಜನರು!
Be the first to comment