ಗಂಗಾವತಿ(ಕೊಪ್ಪಳ): ಹಾವು ಎಂದರೆ ಎಂಥವರಿಗಾದರೂ ಭಯ ಇರುತ್ತದೆ. ಅದು ನಿರುಪದ್ರವಿಯಾಗಿದ್ದರೂ, ವಿಷಕಾರಿ ಅಲ್ಲದಿದ್ದರೂ ಸರಿಯೇ. ಹಾವು ಕಂಡರೆ ಸಾಕು, ಸಾಮಾನ್ಯವಾಗಿ ಜನ ಚಳಿಗಾಲದಲ್ಲೂ ಬೆವರಿ ಬಿಡುತ್ತಾರೆ. ಆದರೆ, ಇಲ್ಲೊಬ್ಬ ಯುವಕ ಯಾವುದೇ ರಕ್ಷಣಾ ಕವಚ, ಸಲಕರಣೆಗಳಿಲ್ಲದೇ ಬರಿಗೈಯಲ್ಲಿ ಹಾವು ಹಿಡಿದು ರಕ್ಷಿಸಿದ್ದಾನೆ. ನಗರದ ವನ್ಯ ಪ್ರಾಣಿ ಹಾಗೂ ಉರಗ ರಕ್ಷಕ ಚನ್ನಬಸವ ಎಂಬಾತ ಹೆಬ್ಬಾವೊಂದನ್ನು ಹಿಡಿದು ರಕ್ಷಿಸಿ ತುಂಗಭದ್ರಾ ನದಿಯಲ್ಲಿ ಬಿಡುವ ಮೂಲಕ ಜನರ ಗಮನ ಸೆಳೆದಿದ್ದಾನೆ. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಹೆಬ್ಬಾವು: ಆನೆಗೊಂದಿ ರಸ್ತೆಯಲ್ಲಿರುವ ಶ್ರೀರಾಮುಲು ಸ್ಮಾರಕ ಮಾಹಾವಿದ್ಯಾಲಯದ ಎದುರಿನ ರಾಮಲಿಂಗೇಶ್ವರ ಬಡಾವಣೆಯ ಜನವಸತಿ ಪ್ರದೇಶದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲ ಯುವಕರು ಕುತೂಹಲಕ್ಕೆ ಗುಂಪುಗೂಡಿ ಹಾವಿನ ಚಲನವಲನದ ಮೇಲೆ ನಿಗಾ ಇಟ್ಟಿದ್ದರು.ವಿಷಯ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದಂತೆಯೇ ಶಶಿಧರ ಉಪ್ಪಾರ ಎಂಬ ಸ್ಥಳೀಯ ಯುವಕ, ಉರಗ ರಕ್ಷಕ ಚನ್ನಬಸವ ಎಂಬವರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು ಯಾವುದೇ ಸುರಕ್ಷತಾ ಸಾಧನೆಗಳಿಲ್ಲದೇ ಹೆಬ್ಬಾವನ್ನು ಸುಲಭವಾಗಿ ಬರಿಗೈಯಲ್ಲಿ ಹಿಡಿದು ಸಮೀಪದ ತುಂಗಭದ್ರಾ ನದಿಯಲ್ಲಿ ಬಿಟ್ಟು ಬಂದಿದ್ದಾರೆ.ಹೆಬ್ಬಾವು ಅಪಾಯಕಾರಿಯಲ್ಲ: ಈ ಕುರಿತು ಮಾತನಾಡಿದ ಉರಗ ರಕ್ಷಕ ಚನ್ನಬಸವ, "ಎಲ್ಲಾ ಹಾವುಗಳು ವಿಷಕಾರಿ ಎಂಬ ಭಾವನೆ ಜನರಲ್ಲಿದೆ. ಇದು ತಪ್ಪು. ಶೇ.90ರಷ್ಟು ಹಾವು ವಿಷಕಾರಿಯಲ್ಲ. ಅವು ತಮ್ಮ ಆತ್ಮರಕ್ಷಣೆಗೆ ಮಾತ್ರ ಕಚ್ಚುತ್ತವೆ. ಅವು ಕಚ್ಚಿದರೂ ಜನ ಸಾಯುವುದಿಲ್ಲ. ಹಾವು ಕಚ್ಚಿದ ಭಯದಿಂದಲೇ ಹೆಚ್ಚಿನ ಪ್ರಮಾಣದ ಜನ ಸಾಯುತ್ತಾರೆ. ಹೆಬ್ಬಾವು ಕಚ್ಚುವುದಿಲ್ಲ. ಇದು ವಿಷಕಾರಿಯೂ ಅಲ್ಲ. ಕೇವಲ ಪ್ರಾಣಿಗಳನ್ನು ಕೆಲವು ಸಂದರ್ಭದಲ್ಲಿ ಮನುಷ್ಯರನ್ನು ಬಲವಾದ ಸುರಳಿಯಂತೆ ಸುತ್ತಿಕೊಂಡು ಮೂಳೆಗಳನ್ನು ಪುಡಿಗಟ್ಟುವಂತೆ ಮಾಡಿ, ಉಸಿರುಗಟ್ಟಿಸಿ ಸಾಯಿಸಿ ಬಳಿಕ ತಿನ್ನುತ್ತದೆ" ಎಂದು ಮಾಹಿತಿ ನೀಡಿದರು.ಸದ್ಯಕ್ಕೆ ರಕ್ಷಣೆ ಮಾಡಿರುವ ಹೆಬ್ಬಾವು ಇನ್ನೂ ಪ್ರೌಢ ವಯಸ್ಸಿನದ್ದಾಗಿದ್ದು, ಎರಡರಿಂದ ಮೂರು ವರ್ಷದ ಪ್ರಾಯವಿರಬಹುದು. ಸುಮಾರು ಐದುವರೆಯಿಂದ ಆರು ಅಡಿಯವರೆಗೂ ಇದೆ. ಏಳೆಂಟು ಕೆ.ಜಿ ಭಾರವಿದೆ ಎಂಬ ಮಾಹಿತಿ ಸಿಕ್ಕಿದೆ. ಯುವಕ ಹಾವನ್ನು ರಕ್ಷಿಸುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಯೂ ಸ್ಥಳದಲ್ಲಿ ಹಾಜರಿದ್ದರು.ಇದನ್ನೂ ಓದಿ: ಗಾಡಿ ಹತ್ತುವ ಮುನ್ನ ಹುಷಾರ್: ಸ್ಕೂಟಿ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ರಕ್ಷಣೆ
Be the first to comment