ಹಾವೇರಿ: ಇಂಡಿಗೋ ವಿಮಾನಗಳ ಹಾರಾಟ ರದ್ದು ಬಿಸಿ ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೂ ತಟ್ಟಿದೆ. ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಯಾಣಿಕರು ದೆಹಲಿಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.ಹಾವೇರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಪ್ರಯಾಣಿಕರು ಬೇರೆ ಮಾರ್ಗ ಸಿಗದೆ ದೆಹಲಿಯಲ್ಲಿ ಸಿಲುಕಿದ್ದಾರೆ. ಬೇರೆ ಫ್ಲೈಟ್ಗಳಲ್ಲಿ ನಿಗದಿಪಡಿಸಿದ್ದಕ್ಕಿಂತ ಮೂರು ಪಟ್ಟು ದರ ಏರಿಕೆಯಾಗಿದ್ದರಿಂದ, ಬೇರೆ ಫ್ಲೈಟ್ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿಯಲ್ಲಿ ಸಿಲುಕಿರುವ ಕನ್ನಡಿಗರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇಂಡಿಗೋ ವಿಮಾನಗಳ ಸಹವಾಸ ಸಾಕಪ್ಪೋ ಸಾಕು ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕನ್ನಡಿಗರು ನವೆಂಬರ್ 28 ರಂದು ದೆಹಲಿ ಮಾರ್ಗವಾಗಿ ಅಜರ್ ಬೈಜಾನ್ಗೆ ತೆರಳಿದ್ದರು.ಶಿಗ್ಗಾಂವಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಮೂಲದ 80ಕ್ಕೂ ಹೆಚ್ಚು ಜನರ ತಂಡ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿದೆ. ಈ ತಂಡ ಖಾಸಗಿ ಕಂಪನಿಯೊಂದರ ಪ್ರತಿನಿಧಿಗಳಾಗಿ ಅಜರ್ ಬೈಜಾನ್ಗೆ ತೆರಳಿತ್ತು. ಇಂದು ಬೆಳಗ್ಗೆ 10 ಗಂಟೆಗೆ ಈ ತಂಡ ದೆಹಲಿಗೆ ವಾಪಸ್ ಬಂದಿದೆ.ಇವರ ಜೊತೆ ಇನ್ನೂ ಹಲವು ಜಿಲ್ಲೆಗಳ ಸುಮಾರು 100ಕ್ಕೂ ಹೆಚ್ಚು ಜನ ಕನ್ನಡಿಗರು ದೆಹಲಿ ಏರ್ಪೋರ್ಟ್ನಲ್ಲೇ ಸಿಲುಕಿರುವ ಮಾಹಿತಿ ಇದೆ. ಇನ್ನೂ ಮೂರು ದಿನ ಇಂಡಿಗೋ ವಿಮಾನಗಳು ಸಿಗಲ್ಲ ಎಂದಿರುವುದಕ್ಕೆ ಈ ತಂಡ ಬೇಸರ ವ್ಯಕ್ತಪಡಿಸುತ್ತಿದೆ. ಇಲ್ಲಿಯ ಸಿಬ್ಬಂದಿ ಒಂದು ಹನಿ ನೀರು ಸಹ ಕೊಟ್ಟಿಲ್ಲ. ನಾವು ಹೇಗೆ ಊರಿಗೆ ತಲುಪುವುದು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಇಂಡಿಗೋ ವಿಮಾನ ರದ್ದು: ವಧು-ವರರಿಲ್ಲದೇ ಹುಬ್ಬಳ್ಳಿಯಲ್ಲಿ ನಡೀತು ಆರತಕ್ಷತೆ; ಆನ್ಲೈನ್ನಲ್ಲೇ ಆಶೀರ್ವಾದ ಪಡೆದ ನವದಂಪತಿ
Be the first to comment