ಚಿಕ್ಕಮಗಳೂರು: ಹಲವು ದಿನಗಳಿಂದ ಬೀದಿ ನಾಯಿಗಳನ್ನು ಬೇಟೆಯಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ. ಬಯಲು ಸೀಮೆ ಪ್ರದೇಶದಲ್ಲಿ ಚಿರತೆ ಹಾವಳಿ ಮಿತಿ ಮೀರಿ ಹೋಗುತ್ತಿದ್ದು, ತರೀಕೆರೆ ಹಾಗೂ ಅಜ್ಜಂಪುರ, ಕಡೂರು ತಾಲೂಕಿನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಕಡೂರು ತಾಲೂಕಿನ ಬೀರೂರಿನ ಕನಕ ನೀರಿನ ಟ್ಯಾಂಕ್ ಬಳಿ ಚಿರತೆ ಪ್ರತ್ಯಕ್ಷವಾಗಿ ಮನೆಯಲ್ಲಿ ಸಾಕಿದ ನಾಯಿಯನ್ನು ಬೇಟೆಯಾಡಲು ಹೊಂಚು ಹಾಕಿತ್ತು.ಈ ಘಟನೆ ಬೆನ್ನಲ್ಲೇ, ತರೀಕೆರೆ ತಾಲೂಕಿನಲ್ಲಿಯೂ ಇದೇ ರೀತಿ ಚಿರತೆ ನಾಯಿ ಬೇಟೆಯಾಡಿ ಜನರ ನಿದ್ದೆಗೆಡಿಸಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ, ಮನವಿ ಮಾಡಿದ್ದರು. ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ. ಬೋನಿಗೆ 4 ವರ್ಷದ ಹೆಣ್ಣು ಚಿರತೆಯಾಗಿದ್ದು, ಲಿಂಗದಹಳ್ಳಿ, ಉಡೇವಾ ಸುತ್ತಮುತ್ತ ಹಲವು ದಿನಗಳಿಂದ ಸಂಚಾರ ಮಾಡುತ್ತಿತ್ತು. ಈ ಗ್ರಾಮದಲ್ಲಿ 8ಕ್ಕೂ ಹೆಚ್ಚು ನಾಯಿಗಳನ್ನು ಬೇಟೆಯಾಡುವ ಮೂಲಕ ಚಿರತೆ ಆತಂಕ ಮೂಡಿಸಿತ್ತು. ಚಿರತೆ ಸಂಚಾರದಿಂದ ಆತಂಕಕ್ಕೆ ಒಳಗಾಗಿದ್ದ ಜನ, ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುವಂತಾಗಿತ್ತು.ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯವನ್ನು ಮಾಡಿದ ಬೆನ್ನಲ್ಲೇ, ಅರಣ್ಯ ಇಲಾಖೆ ಸಿಬ್ಬಂದಿಗಳು ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದ ಜಾಗದಲ್ಲಿ ಬೋನು ಇಟ್ಟಿದ್ದರು. ಚಿರತೆ ಸೆರೆಯಿಂದ ನೆಮ್ಮದಿಯಿಂದ ಗ್ರಾಮದಲ್ಲಿ ಸಂಚಾರ ಮಾಡುವಂತೆ ಆಗಿದೆ.ಇದನ್ನೂ ಓದಿ: ಪಟ್ಟಣಕ್ಕೆ ಬಂದ ಗಜರಾಜ, ಬೈಕ್ಅನ್ನು ಎತ್ತಿಬಿಸಾಡಿದ: ಕಾಡಿಗಟ್ಟಲು ಅರಣ್ಯ ಇಲಾಖೆಯಿಂದ ಆಪರೇಷನ್
Be the first to comment