ಚಿಕ್ಕಮಗಳೂರು: ಚೀನಾದ ಹುಡುಗಿಯನ್ನು ಚಿಕ್ಕಮಗಳೂರು ಜಿಲ್ಲೆಯ ಹುಡುಗ ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರಿನ ಯುವಕ ರೂಪಕ್ ಹಾಗೂ ಚೀನಾ ಮೂಲದ ಯುವತಿ ಜಡೆ (Jade) ಹಸೆಮಣೆ ಏರಿದ ಜೋಡಿ. ಈ ಮೂಲಕ ಪ್ರೀತಿಗೆ ಯಾವುದೇ ದೇಶ, ಭಾಷೆ ಅಥವಾ ಗಡಿಯ ಹಂಗಿಲ್ಲ ಎಂಬುದನ್ನು ಈ ಜೋಡಿ ಸಾಬೀತುಪಡಿಸಿದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ರೂಪಕ್ ಹಾಗೂ ಜಡೆ ನಡುವೆ ಪ್ರೇಮಾಂಕುರವಾಗಿದ್ದು, ಇವರ ಪ್ರೇಮಕ್ಕೆ ಮಲೆನಾಡಿನ ಮಣ್ಣಿನಲ್ಲಿ ಅಧಿಕೃತ ಮುದ್ರೆ ಬಿದ್ದಿದೆ. ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಇಬ್ಬರ ಕಡೆಯ ಸಂಬಂಧಿಕರು, ಅಪಾರ ಬಂಧು ಮಿತ್ರರು ಹಾಗೂ ಸ್ನೇಹಿತ ಸಮ್ಮುಖದಲ್ಲಿ ಈ ಅದ್ಧೂರಿ ವಿವಾಹ ನಡೆದಿದ್ದು, ದೇಶ, ಭಾಷೆ, ಗಡಿ ಮೀರಿ ಹಸೆಮಣೆ ಏರಿದ ಅಪರೂಪದ ಜೋಡಿಗೆ ಸ್ಥಳೀಯರು ಕೂಡ ಹರಸಿ ಹಾರೈಸಿದರು. ಹಿಂದೂ ಸಂಪ್ರದಾಯದಂತೆ ಚೀನಾದ ಹುಡುಗಿ ಚಿಕ್ಕಮಗಳೂರಿನ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾರೆ.ರೂಪಕ್ ಮೂಲತಃ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡಿನ ಯುವಕ. ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದಾಗ ಜಡೆಯ ಪರಿಚಯವಾಗಿದ್ದು, ಇದೇ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಪೋಷಕರು ಬಳಿ ಹೇಳಿದಾಗ ಎರಡೂ ಕಡೆಯ ಸಂಬಂಧಿಕರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಚೀನಾದಿಂದ ಮಗಳನ್ನು ಕರೆತಂದ ಆಕೆಯ ಹೆತ್ತವರು ರೂಪಕ್ಗೆ ಧಾರೆ ಎರೆದು ಕೊಟ್ಟಿದ್ದಾರೆ. ದಂಪತಿ ಅಪ್ಪಟ ಭಾರತೀಯ ಶೈಲಿಯಲ್ಲಿ ಕಂಗೊಳಿಸಿದ್ದು, ಮದುವೆ ವಿಚಾರದಲ್ಲಿ ಭಾರತ - ಚೀನಾ ಸಂಪ್ರದಾಯ ಎರಡೂ ಒಂದೇ ರೀತಿ ಎಂದು ಜಡೆ ಹರ್ಷ ವ್ಯಕ್ತಪಡಿಸಿದ್ದಾಳೆ. ಮದುವೆ ವೇಳೆ ವರ ರೂಪಕ್ ಪಂಚೆ, ಶರ್ಟ್ನಲ್ಲಿ ಮಿಂಚಿದ್ರೆ, ವಧು ಜಡೆ ಚೀನಾದವಳಾದರೂ ಸೀರೆ ಉಟ್ಟಿದ್ದು ನೆರೆದಿದ್ದವರ ಹುಬ್ಬೇರಿಸಿತ್ತು. ರೂಪಕ್ ಹಾಗೂ ಜಡೆ ಸದ್ಯ ಆಸ್ಟ್ರೇಲಿಯಾದಲ್ಲೇ ಸೆಟಲ್ ಆಗಿದ್ದಾರೆ. ಇದನ್ನೂ ಓದಿ: ಉಡುಪಿಯ ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ; ಧಾರೆ ಎರೆದುಕೊಟ್ಟ ಡಿಸಿ
Comments