ಅನಕಪಲ್ಲಿ (ಆಂಧ್ರಪ್ರದೇಶ): ಸಂಕ್ರಾಂತಿ ಹಬ್ಬದ ಅಂಗವಾಗಿ ಮೀನುಗಾರರು ಸಾಂಪ್ರದಾಯಿಕ ದೋಣಿ ಸ್ಪರ್ಧೆ ಆಯೋಜಿಸಿ ಸಂಭ್ರಮಿಸಿದರು. ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಎಸ್. ರಾಯವರಂ ಮಂಡಲದ ಬಂಗಾರಮ್ಮಪಳೆಂ ಕರಾವಳಿ ಪ್ರದೇಶದ ಮೀನುಗಾರರು ಸಾಂಪ್ರದಾಯಿಕ ದೋಣಿ ಸ್ಪರ್ಧೆ ಆಯೋಜಿಸಿದ್ದರು. ಇದರಿಂದ ಸಂಕ್ರಾಂತಿ ಹಬ್ಬ ಸಂಭ್ರಮದಲ್ಲಿದ್ದ ಮೀನುಗಾರ ಸಮುದಾಯದಲ್ಲಿ ಉತ್ಸಾಹ ಇಮ್ಮಡಿಯಾಯಿತು.ಸ್ಪರ್ಧೆಗಳಲ್ಲಿ ಹತ್ತಿರದ ಹಳ್ಳಿಗಳ ಮೀನುಗಾರರು ಭಾಗವಹಿಸಿ, ಸಮುದ್ರದಲ್ಲಿ ತಮ್ಮ ದೋಣಿಗಳನ್ನು ಉತ್ಸಾಹದಿಂದ ನಡೆಸಿದರು. ತುರುಸಿನ ಸ್ಪರ್ಧೆಯಲ್ಲಿ ಮೀನುಗಾರರು ತಮ್ಮ ಶಕ್ತಿ, ಕೌಶಲ್ಯ ಪ್ರದರ್ಶಿಸಿದರು. ರೋಮಾಂಚಕ ದೋಣಿ ಓಟ ವೀಕ್ಷಿಸಲು ಕರಾವಳಿ ಉದ್ದಕ್ಕೂ ದೊಡ್ಡ ಜನಸಮೂಹ ಜಮಾಯಿಸಿತ್ತು. ವಿಜೇತರಿಗೆ ನಗದು ಬಹುಮಾನ: ಮೀನುಗಾರರ ಭಾಗವಹಿಸುವಿಕೆ ಪ್ರೋತ್ಸಾಹಿಸಲು ಮತ್ತು ಅವರ ಪರಿಶ್ರಮವನ್ನು ಗುರುತಿಸಲು ಸಂಘಟಕರು ವಿಜೇತರಿಗೆ ನಗದು ಬಹುಮಾನ ನೀಡಿದರು.'ಕರಾವಳಿ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳ ಭಾಗವಾಗಿ ಪ್ರತಿ ವರ್ಷ ಸಂಕ್ರಾಂತಿ ವೇಳೆ ದೋಣಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಇದು ಮೀನುಗಾರರ ಸಾಂಸ್ಕೃತಿಕ ಸಂಪ್ರದಾಯ ಜೀವಂತವಾಗಿರಿಸುವ ಜೊತೆಗೆ ಸುಗ್ಗಿಯ ಹಬ್ಬದ ಸಮಯದಲ್ಲಿ ಸಮುದಾಯದಲ್ಲಿ ಏಕತೆ ಮತ್ತು ಸಂತೋಷ ಹೆಚ್ಚಿಸುತ್ತದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.ಬಂಗಾರಮ್ಮಪಳೆಂ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಕ್ರಾಂತಿ ಆಚರಣೆಯ ಪ್ರಮುಖ ಭಾಗವಾಗಿ ದೋಣಿ ಸ್ಪರ್ಧೆಗಳನ್ನು ಪ್ರತಿ ವರ್ಷ ಆಯೋಜಿಸುವುದು ಸಂಪ್ರದಾಯ.
Be the first to comment