ಚಾಮರಾಜನಗರ: ದೇವಸ್ಥಾನದ ಹುಂಡಿಗಳನ್ನು ಕದ್ದೊಯ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಂಜಯ್ಯನಹುಂಡಿ, ಯಡಹುಂಡಿಯಲ್ಲಿ ಬುಧವಾರ ನಡೆದಿದೆ. ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಕೈಮುಗಿಯಲು ಹೋದಾಗ ಹುಂಡಿಗಳಿಗೆ ಕಳ್ಳರು ಕನ್ನ ಹಾಕಿರುವುದು ಗೊತ್ತಾಗಿದೆ.ರಾತ್ರಿ ಇದ್ದ ದೇವರ ಹುಂಡಿಯನ್ನು ಬೆಳಗಾಗುವಷ್ಟರಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಚೆನ್ನಂಜಯ್ಯನಹುಂಡಿ ಮತ್ತು ಯಡಹುಂಡಿ ಗ್ರಾಮದ ದೇವಾಲಯದಲ್ಲಿ ಇದ್ದ ಹುಂಡಿಯನ್ನು ಕಳ್ಳರು ಕದ್ದು, ಅದರಲ್ಲಿ ಇದ್ದ ಹಣ ತೆಗೆದುಕೊಂಡು ಹುಂಡಿಯನ್ನು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.ಬುಧವಾರ ಬೆಳಗ್ಗೆ ದೇವರಿಗೆ ಕೈ ಮುಗಿಯಲು ಬಂದ ಗ್ರಾಮಸ್ಥರಿಗೆ ದೇವಾಲಯದ ಬಾಗಿಲ ಬೀಗ ಒಡೆದಿರುವುದು ಕಂಡು ಬಂದು ಒಳಹೊಕ್ಕು ನೋಡಿದರೆ ದೇವಾಲಯದೊಳಗೆ ಇಟ್ಟಿದ್ದ ಹುಂಡಿ ಕಾಣೆಯಾಗಿತ್ತು. ಸುತ್ತಮುತ್ತಲು ಪರಿಶೀಲಿಸಿದಾಗ ದೂರದಲ್ಲಿ ಹುಂಡಿ ಮಾತ್ರ ಪತ್ತೆಯಾಗಿದೆ. ಆದರೆ, ಅದರೊಳಗಿದ್ದ ಹಣ ಮಾತ್ರ ಕಾಣೆಯಾಗಿತ್ತು.ಯಡಹುಂಡಿಯಲ್ಲಿ ಕಳೆದ 6-7 ತಿಂಗಳಿಂದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಇದೀಗ ಕಳ್ಳರ ಪಾಲಾಗಿದೆ. ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ನಡೆಸಿ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹೆಚ್ಚಾದಾಗ ಮಾತ್ರ ಕಳ್ಳತನ ಪ್ರಕರಣಗಳು ನಿಲ್ಲುವಂತಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಯಡಹುಂಡಿಯ ಗಣಪತಿ ಹಾಗೂ ಚೆ.ಹುಂಡಿಯ ಶನೇಶ್ವರ ದೇಗುಲ ಹುಂಡಿಗೆ ಕನ್ನ ಹಾಕಲಾಗಿದ್ದು, ಗಣಪತಿ ದೇಗುಲದ ಅರ್ಧ ಬಾಗಿಲನ್ನೇ ಮುರಿದು ಕಳ್ಳರು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ತೆರಕಣಾಂಬಿ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Be the first to comment