ಮೈಸೂರು: ಅಪಘಾತದಿಂದ ಗಾಯಗೊಂಡಿದ್ದ ಲಂಗೂರ್ ಕೋತಿ ಮರಿಗೆ ಚಿಕಿತ್ಸೆ ಕೊಡಿಸಿ, ಅರಣ್ಯಾಧಿಕಾರಿಗಳು ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ.ತಾಲೂಕಿನ ನಾಗರಹೊಳೆ ಉದ್ಯಾನವನದೊಳಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಲಂಗೂರ್ ಮರಿಯನ್ನು ಎಸಿಎ ಲಕ್ಷ್ಮಿಕಾಂತ್ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕಾರ್ಯನಿಮಿತ್ತ ಉದ್ಯಾನದ ವೀರನಹೊಸಹಳ್ಳಿ ವಲಯಕ್ಕೆ ತೆರಳಿದ್ದ ವೇಳೆ ವೀರನಹೊಸಹಳ್ಳಿ-ನಾಗರಹೊಳೆ ಮುಖ್ಯರಸ್ತೆಯಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಲಂಗೂರ್ ಮರಿ ಗಾಯಗೊಂಡು ನರಳಾಡುತ್ತಿದ್ದುದ್ದನ್ನು ಕಂಡ ಎಸಿಎ ಲಕ್ಷ್ಮಿಕಾಂತ್, ಪ್ರೊಬೇಷನರಿ ಎಸಿಎ ಲತಾ ಭಟ್ ಅವರು ಮರಿಯನ್ನು ರಕ್ಷಿಸಿ, ಹುಣಸೂರು ಅರಣ್ಯ ಇಲಾಖೆ ಕಚೇರಿಗೆ ತಂದು ನಾಗರಹೊಳೆ ಪಶುವೈದ್ಯ ಡಾ. ರಮೇಶ್ ಅವರಿಂದ ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಳ್ಳುತ್ತಿದೆ."ಮರಿಯ ಸ್ಪೈನಲ್ ಕಾರ್ಡ್‌ಗೆ ಪೆಟ್ಟು ಬಿದ್ದಿದ್ದು, ಆರೈಕೆ ಮಾಡಲಾಗುತ್ತಿದೆ" ಎಂದು ಪಶುವೈದ್ಯ ಡಾ. ರಮೇಶ್ ಹೇಳಿದ್ದಾರೆ. "ತಾಯಿ ಲಂಗೂರು ತನ್ನ ಮರಿಗಾದ ಗಾಯದಿಂದ ನರಳುತ್ತಿದ್ದುದ್ದನ್ನು ದೂರದಲ್ಲೇ ಮರದಲ್ಲೇ ಕುಳಿತು ಮರಗುತ್ತಿತ್ತು. ಅದನ್ನು ಕಚೇರಿಗೆ ತಂದು ಚಿಕಿತ್ಸೆ ಕೊಡಿಸಿ ಚೇತರಿಕೆಯಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಗುಣಮುಖವಾದ ಬಳಿಕ ಲಂಗೂರ್‌ಗಳ ಬಳಿ ಬಿಡುತ್ತೇವೆ" ಎಂದು ಎಸಿಎ ಲಕ್ಷ್ಮಿಕಾಂತ್ ಮಾಹಿತಿ ನೀಡಿದರು.ವಾಹನ ಸವಾರರು ಎಚ್ಚರ ವಹಿಸಲಿ: ಹುಣಸೂರಿನಿಂದ ಕೊಡಗು ಜಿಲ್ಲೆಗೆ ಹೋಗುವಾಗ ನಾಗರಹೊಳೆ ರಾಷ್ಟ್ರೀಯ ಮುಖ್ಯ ರಸ್ತೆಯಿಂದ ವಾಹನಗಳು ಹೋಗುತ್ತವೆ. ಈ ವೇಳೆಯಲ್ಲಿ ಪ್ರಾಣಿಗಳು ಸಾಮಾನ್ಯವಾಗಿ ರಸ್ತೆದಾಟುತ್ತಿರುತ್ತವೆ. ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಎಚ್ಚರಿಕೆಯಿಂದ ನಿಧಾನವಾಗಿ ವಾಹನ ಚಲಾಯಿಸುವ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗುವಂತೆ ಎಸಿಎ ಲಕ್ಷಿಕಾಂತ್ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಂಡ್ಯ: ಸಾಕು ಪ್ರಾಣಿಗಳ ತಿಂದು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Be the first to comment