ಶಿವಮೊಗ್ಗ: ರಾಜ್ಯದ ಎರಡನೇ ಅತಿದೊಡ್ಡ ದಸರಾ ಶಿವಮೊಗ್ಗ ಜಂಬೂ ಸವಾರಿ ಪ್ರಾರಂಭವಾಗಿದೆ. ಮೈಸೂರಿನಂತೆ ಶಿವಮೊಗ್ಗದಲ್ಲೂ ಸಹ ತಾಯಿ ಚಾಮುಂಡೇಶ್ವರಿಯ ಬೆಳ್ಳಿ ಮಂಟಪದ ಮೆರವಣಿಗೆ ನಡೆಯುತ್ತಿದೆ. ಸಕ್ರೆಬೈಲಿನ ಮೂರು ಆನೆಗಳನ್ನು ಜಂಬೂ ಸವಾರಿಗೆ ಸಿದ್ಧಗೊಳಿಸಲಾಗಿದೆ. ತಯಾರಿ ವರದಿ ಇಲ್ಲಿದೆ. ಬೆಳಗ್ಗೆಯಿಂದಲೇ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆರವರು ಮೂರು ಆನೆಗಳಿಗೆ ಬಣ್ಣ ಹಚ್ಚಿ ಸಿಂಗಾರಗೊಳಿಸಿದ್ದಾರೆ. ನಗರದ ಕೋಟೆ ರಸ್ತೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಆನೆಗಳಿಗೆ ದಸರಾ ಬಿಡಾರ ಮಾಡಲಾಗಿದ್ದು, ಇಲ್ಲಿಯೇ ಆನೆಗಳಿಗೆ ಸಿಂಗಾರ ಮಾಡಲಾಗಿದೆ. ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕ ಕೋಟೆ ಮುಂಭಾಗದಲ್ಲಿ ಬಂಜೂ ಸವಾರಿ ಪ್ರಾರಂಭವಾಯಿತು. ಜಂಬೂ ಸವಾರಿಗೂ ಮುನ್ನಾ ನಂದಿ ಧ್ವಜ ಪೂಜೆ ನಡೆಸಿ, ಮೆರವಣಿಗೆಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಚಾಲನೆ ನೀಡಿದರು. ಸಾಗರ ಬದಲಿಗೆ ಸೋಮಣ್ಣನಿಂದ ಬಂಜೂ ಸವಾರಿ: ಪ್ರತಿ ವರ್ಷ ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಸಾಗರ ಆನೆ ಹೊರುತ್ತಿತ್ತು. ಆದರೆ ಈ ಬಾರಿ ಸೋಮಣ್ಣ ಹೊರಲಿದ್ದಾನೆ. ಹಾಲಿ ಸಕ್ರೆಬೈಲಿನಿಂದ ಸಾಗರ, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳು ಆಗಮಿಸಿ, ತಾಲೀಮು ನಡೆಸಿವೆ. ನಿನ್ನೆ ಸಂಜೆ ಅರಣ್ಯಾಧಿಕಾರಿಗಳು ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಸೋಮಣ್ಣ ಆನೆಗೆ ವಹಿಸಿಕೊಟ್ಟಿದ್ದಾರೆ. ಈ ದಸರಾ ಮೆರವಣಿಗೆಯಲ್ಲಿ ಹೆಣ್ಣಾನೆಗಳಿಲ್ಲದೆಯೇ ಅಂಬಾರಿ ಸಾಗುತ್ತಿದೆ. ಇದನ್ನೂ ಓದಿ: ಮೈಸೂರು ದಸರಾ: ಇದೇ ಮೊದಲ ಬಾರಿಗೆ ವಜ್ರಮುಷ್ಟಿ ಕಾಳಗ ರದ್ದು: ಕಾರಣವೇನು?