ಬೆಳಗಾವಿ: ನಾಳೆಯಿಂದ (ಸೋಮವಾರ) ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗಾವಿಗೆ ಆಗಮಿಸಿದರು.ನವಲಗುಂದದಿಂದ ಹೆಲಿಕಾಪ್ಟರ್ ಮೂಲಕ ಸುವರ್ಣ ವಿಧಾನಸೌಧ ಮುಂಭಾಗದ ಹೆಲಿಪ್ಯಾಡಿಗೆ ಬಂದಿಳಿದ ಮುಖ್ಯಮಂತ್ರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಆಸೀಫ್ ಸೇಠ್, ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಡಿಜಿಪಿ ಹಿತೇಂದ್ರ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿ.ಪಂ.ಸಿಇಒ ರಾಹುಲ್ ಶಿಂಧೆ ಸೇರಿ ಮತ್ತಿತರರು ಹೂಗುಚ್ಛ ನೀಡಿ ಸ್ವಾಗತಿಸಿದರು.ಬಳಿಕ ಪೊಲೀಸ್ ಗೌರವ ವಂದನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿದರು. ಮುಖ್ಯಮಂತ್ರಿಗಳ ಜೊತೆಗೆ ಸಚಿವರಾದ ಕೆ.ಜೆ.ಜಾರ್ಜ್, ಹೆಚ್.ಸಿ.ಮಹಾದೇವಪ್ಪ, ಕೃಷ್ಣಬೈರೇಗೌಡ ಕೂಡ ಆಗಮಿಸಿದರು. ಇಲ್ಲಿಂದ ನೇರವಾಗಿ ತಾವು ವಾಸ್ತವ್ಯ ಇರಲಿರುವ ಬೆಳಗಾವಿ ನಗರದ ಪ್ರವಾಸಿ ಮಂದಿರ ಕಡೆ ಕಾರಿನಲ್ಲಿ ತೆರಳಿದರು.''ಸಂಪುಟ ದರ್ಜೆ ಸಚಿವರು, ಹಿರಿಯ ಶಾಸಕರಿಗೆ ವಿಟಿಯು ಸೇರಿ ಇತರ ಅತಿಥಿ ಗೃಹದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದರ ಜೊತೆಗೆ ಸರ್ಕಾರಿ, ಖಾಸಗಿ ಸೇರಿ 3 ಸಾವಿರಕ್ಕೂ ಅಧಿಕ ಕೊಠಡಿಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ. 700-800 ವಾಹನಗಳನ್ನು ಓಡಾಟಕ್ಕೆ ಬಳಸಲು ಕಾಯ್ದಿರಿಸಿದ್ದೇವೆ'' ಎಂದು ಜಿಲ್ಲಾಧಿಕಾರಿ ಇತ್ತೀಚಿಗೆ ತಿಳಿಸಿದ್ದರು.ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತಯಾರಿ ಹೇಗಿದೆ? ಹೆಚ್ಚಿನ ಮುತುವರ್ಜಿ ವಹಿಸಿರುವ ಡಿಸಿ ರೋಷನ್ ಹೇಳಿದ್ದಿಷ್ಟು!
Be the first to comment