ಮಂಡ್ಯ: ಮಂಡ್ಯ ತಾಲೂಕಿನ ಬಿ. ಯರಹಳ್ಳಿ ಸಮೀಪದ ವಿಶ್ವೇಶ್ವರಯ್ಯ ನಾಲೆಯಲ್ಲಿ ಕಾರೊಂದು ಬಿದ್ದ ಘಟನೆ ಸೋಮವಾರ ಬೆಳಗಿನಜಾವ 4:30ರ ಸಮಯದಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಂಡ್ಯದ ಕಲ್ಲಹಳ್ಳಿ ನಿವಾಸಿಯಾಗಿರುವ ಕೃಷ್ಣ ಪಾರಾದವರು. ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನಾಲೆಗೆ ಉರುಳಿ ಬಿದ್ದಿದೆ. ಘಟನಾ ಸ್ಥಳದಲ್ಲಿ ತಡೆಗೋಡೆಯೂ ಇರಲಿಲ್ಲ. ತುಂಬಿ ಹರಿಯುತ್ತಿದ್ದ ನಾಲೆಗೆ ಕಾರು ಬಿದ್ದಿದ್ದು, ನೀರಿನಲ್ಲಿ ಮುಳುಗುವ ಸಂದರ್ಭಲ್ಲಿಯೇ ಚಾಲಕ ಸಮಯಪ್ರಜ್ಞೆಯಿಂದ ಬಾಗಿಲು ತೆರೆದು ಈಜಿಕೊಂಡು ದಡ ಸೇರಿದ್ದಾರೆ.ಘಟನಾ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಮುಳುಗಿದ್ದ ಕಾರನ್ನು ಕ್ರೇನ್ ಸಹಾಯದಿಂದ ನೀರಿನಿಂದ ಮೇಲಕ್ಕೆತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.ಘಟನೆ ಬಗ್ಗೆ ಮಾತನಾಡಿದ ಸ್ಥಳೀಯರೊಬ್ಬರು, 'ಈ ಮಾರ್ಗವು ಹಲವು ಊರುಗಳಿಗೆ ಸಂಪರ್ಕ ಒದಗಿಸುತ್ತದೆ. ಅಲ್ಲದೆ, ಹಲವು ಖಾಸಗಿ ಶಾಲಾ ಬಸ್ಗಳು ಹಾಗೂ ಇತರ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ ನಾಲೆಯ ಅಂಚಿನುದ್ದಕ್ಕೂ ತಡೆಗೋಡೆಯಿಲ್ಲ. ಈ ಪ್ರದೇಶವು ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಗಳ ಗಡಿಯಂಚಿನಲ್ಲಿದೆ. ಹೀಗಾಗಿ, ಎರಡೂ ಕ್ಷೇತ್ರಗಳ ಶಾಸಕರು ಈ ಬಗ್ಗೆ ಗಮನ ಹರಿಸಬೇಕು. ಅಪಾಯವಾಗದ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಕ್ರಮ ವಹಿಸಬೇಕು' ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: 20 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ
Be the first to comment