ವಿಜಯಪುರ: ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯಗಳಿಂದ ಎರಡು ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು ಚಡಚಣ, ಇಂಡಿ ಮತ್ತು ಆಲಮೇಲ ತಾಲೂಕುಗಳ ಭೀಮಾ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಆವರಿಸಿದೆ.ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ಗಳು ಜಲಾವೃತಗೊಂಡಿವೆ. ಗೋವಿಂದಪುರ-ಭಂಡಾರಕವಟೆ, ಔಜ-ಶಿರನಾಳ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬ್ಯಾರೇಜ್ಗಳು ಜಲಾವೃತಗೊಂಡಿದ್ದು, ಕರ್ನಾಟಕ - ಮಹಾರಾಷ್ಟ್ರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೀಮಾನದಿ ಸುತ್ತಮುತ್ತಲ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆ ನಾಶದ ಆತಂಕದಲ್ಲಿದ್ದಾರೆ.ಮೊಸಳೆ ಪ್ರತ್ಯಕ್ಷ: ಮತ್ತೊಂದೆಡೆ, ಮುದ್ದೇಬಿಹಾಳ ತಾಲೂಕಿನ ಕೇಸಾಪೂರ ಗ್ರಾಮದ ಜಮೀನಿನಲ್ಲಿ ಮೊಸಳೆ ಪತ್ತೆಯಾಗಿದೆ. ಅಶೋಕ ಹಂಗರಗೊಂಡ ಎಂಬವರ ಜಮೀನಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದೆ. ತೊಗರಿ ಬೆಳೆಗಳ ಮಧ್ಯೆ ಅವಿತುಕೊಂಡಿದ್ದ ಮೊಸಳೆಯನ್ನು ಅಶೋಕ ಹಗರಗೊಂಡ, ಮುದಕಪ್ಪಾ ಪೂಜಾರಿ ಗದ್ದೆಪ್ಪ ಬೋಯಾರ, ಅಕ್ಬರ್, ರಫೀಕ್ ಹಾಗೂ ಆಸೀಫ್ ತಾಳಿಕೋಟೆ ಎಂಬವರು ಸೇರಿ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಮೊಸಳೆಯನ್ನು ವಶಪಡಿಸಿಕೊಂಡ ಅರಣ್ಯಾಧಿಕಾರಿಗಳು ಕೃಷ್ಣಾ ನದಿ ನೀರಿನಲ್ಲಿ ಬಿಟ್ಟಿದ್ದಾರೆ.ನಮ್ಮ ಭಾಗದಲ್ಲಿ ಮೊಸಳೆ ಕಾಟ ಹೆಚ್ಚಾಗಿದೆ. ಅವು ಗ್ರಾಮಗಳು, ಜಮೀನುಗಳತ್ತ ಬರದಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಒತ್ತಾಯಿಸಿದರು.ಇದನ್ನೂ ಓದಿ: ವರುಣನ ಆರ್ಭಟಕ್ಕೆ ಕಲಬುರಗಿಯಲ್ಲಿ ಅವಾಂತರ ಸೃಷ್ಟಿ: ಗೋಡೆ ಕುಸಿದು ಬಾಲಕಿ ಸಾವು, ರೈತರ ಬೆಳೆ ನಾಶ
Be the first to comment