ಬಾರ್ಮರ್ (ರಾಜಸ್ಥಾನ): ಪ್ಲಾಸ್ಟಿಕ್ ಬಲೆಯಲ್ಲಿ ಸಿಲುಕಿದ್ದ ಜಿಂಕೆಯ ಜೀವವನ್ನು ಸಹೋದರ, ಸಹೋದರಿಯರು ಕಾಪಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಿಕ್ಕ ಮಕ್ಕಳ ಕಾರ್ಯವು ಜನಮೆಚ್ಚುಗೆಗೆ ಪಾತ್ರವಾಗಿದೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಗುರುವಾರ ಈ ಪ್ರಶಂಸನೀಯ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.ಅಲ್ಲಿನ ಗಣಪತಿನಗರ ಭನ್ವಾರ್ ಪ್ರದೇಶದ ಹೊಲವೊಂದರಲ್ಲಿ ಜಿಂಕೆಯೊಂದು ಪ್ಲಾಸ್ಟಿಕ್ ಬಲೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿತ್ತು. ಬಲೆಯಲ್ಲಿ ಕೊಂಬುಗಳು ಸಿಕ್ಕಿಹಾಕಿಕೊಂಡಿದ್ದರಿಂದ, ಬಿಡಿಸಿಕೊಳ್ಳಲಾಗದೇ ಜೀವಭಯದಲ್ಲಿ ಕಷ್ಟಪಡುತ್ತಿತ್ತು.ಈ ದೃಶ್ಯ ಕಂಡ ಬಾಲಕ ಸವಾಯಿ ರಾಮ್ ತಕ್ಷಣ ಸಹೋದರ, ಸಹೋದರಿಯರನ್ನು ಕರೆದಿದ್ದಾನೆ. ಆಗ ಮನೆಯಲ್ಲಿ ಓದುತ್ತಿದ್ದ ಮಮತಾ, ಜಾಸು ಮತ್ತು ಜೋಗೇಶ್ ಎಂಬ ಮಕ್ಕಳು ತಮ್ಮ ಪುಸ್ತಕಗಳನ್ನು ಬದಿಗಿಟ್ಟು, ತಕ್ಷಣ ಜಿಂಕೆಯ ರಕ್ಷಣೆಗೆ ಧಾವಿಸಿದ್ದಾರೆ. ಈ ನಾಲ್ವರು ಸಹೋದರ, ಸಹೋದರಿಯರು ಹಿಂಜರಿಯದೇ, ಆತಂಕದಲ್ಲಿ ಒದ್ದಾಡುತ್ತಿದ್ದ ಜಿಂಕೆಯನ್ನು ಹಿಡಿದು ಬಲೆಯಿಂದ ತಪ್ಪಿಸಲು ಮುಂದಾದರು. ಮನೆಯಿಂದ ಕುಡುಗೋಲು ತಂದು ನಿಧಾನವಾಗಿ ಬಲೆಯನ್ನು ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಸೇರಿ ಜಿಂಕೆಯನ್ನು ಹಿಡಿದುಕೊಂಡು ರಕ್ಷಣೆಗೆ ನೆರವಾಗಿದ್ದಾರೆ. ಕೆಲ ನಿಮಿಷಗಳ ಬಳಿಕ, ಜಿಂಕೆಯನ್ನು ಬಲೆಯಿಂದ ಮುಕ್ತಗೊಳಿಸಿದ್ದು, ಅದು ಸ್ಥಳದಿಂದ ಓಡಿಹೋಯಿತು. ಮಕ್ಕಳು ಮೂಕ ಜೀವಿಯೊಂದನ್ನು ರಕ್ಷಿಸಿ ಸಂಭ್ರಮಪಟ್ಟರು.ಮಕ್ಕಳ ಮಾನವೀಯ ಕಾರ್ಯವನ್ನು ಅವರಲ್ಲೇ ಒಬ್ಬರು ವಿಡಿಯೋ ಸೆರೆಹಿಡಿದಿದ್ದು, ವೈರಲ್ ಆಗಿದೆ. ಸ್ಥಳೀಯ ಸರಪಂಚ್ ದೇವರಾಮ್ ಮಾತನಾಡಿ, "ಈ ಮಕ್ಕಳು ಶೌರ್ಯ ಮತ್ತು ಮಾನವೀಯತೆಗೆ ವಿಶಿಷ್ಟ ಉದಾಹರಣೆ ಆಗಿದ್ದಾರೆ. ಸವಾಯಿ, ಜೋಗೇಶ್, ಮಮತಾ ಮತ್ತು ಜಾಸು ಒಟ್ಟಾಗಿ ಮಾಡಿದ ಕೆಲಸವು ಇಡೀ ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ" ಎಂದು ಮಕ್ಕಳನ್ನು ಶ್ಲಾಘಿಸಿದರು.ಇದನ್ನೂ ಓದಿ: ಬಂಡೀಪುರದಲ್ಲಿ ಮರಿಗಳ ಜೊತೆ ಹುಲಿ ಕೂಲ್ ಕೂಲ್: VIDEO
Be the first to comment