ದಾವಣಗೆರೆ: ತಡರಾತ್ರಿ ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಹರಿಹರ ತಾಲೂಕಿನ ಸಂಕ್ಲಿಪುರ ಹಾಗೂ ಗುಳ್ಳದಹಳ್ಳಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡು, ಎರಡು ಗ್ರಾಮದ ಜನರಿಗೆ ತೊಂದರೆಯಾಗಿದೆ.ನೂರಾರು ಎಕರೆ ಅಡಿಕೆ ತೋಟದಲ್ಲಿ ನೀರು ನಿಂತು, ಮಳೆ ರೈತನ ತಲೆಬಿಸಿ ಹೆಚ್ಚಿಸಿದೆ. ಭತ್ತ ಕೊಯ್ಲಿಗೂ ಮುನ್ನವೇ ನೆಲಕಚ್ಚಿದೆ. ಸಂಕ್ಲಿಪುರ-ಗುಳ್ಳದಹಳ್ಳಿ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಬೃಹತ್ ಹಳ್ಳ ಮೈದುಂಬಿ ರೈತರ ಜಮೀನುಗಳಿಗೆ ನುಗ್ಗಿದೆ.ಸಂಕ್ಲಿಪುರ-ಗುಳ್ಳದಹಳ್ಳಿ ಮಧ್ಯೆ ಹರಿಯುವ ಹಳ್ಳ ಸೇತುವೆಯನ್ನು ಆವರಿಸಿದೆ. ಪ್ರತೀ ಬಾರಿ ಮಳೆ ಜಾಸ್ತಿಯಾದರೆ ಈ ಸಮಸ್ಯೆ ಇಲ್ಲಿನ ಗ್ರಾಮಸ್ಥರಿಗೆ ಸಾಮಾನ್ಯವಾಗಿದೆ.ಮೇಲ್ಸೇತುವೆ ಮಾಡಿ ಮಳೆ ನೀರು ಹಳ್ಳದಲ್ಲಿ ಸರಾಗವಾಗಿ ಹೋಗಲು ಅನುವು ಮಾಡಿಕೊಟ್ಟರೆ ಯಾವುದೇ ಸಮಸ್ಯೆ ಇರುವುದಿಲ್ಲ. ಮೇಲ್ಸೇತುವೆ ಮಾಡಿ ಎಂದು ಸಂಬಂಧಪಟ್ಟವರಿಗೆ ಸಾಕಷ್ಟು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ರೈತ ಗಜೇಂದ್ರ ಎಂಬವರು ಪ್ರತಿಕ್ರಿಯಿಸಿ, "ಅಡಿಕೆ ತೋಟ ಜಲಾವೃತವಾಗಿವೆ. ಭತ್ತ ಕೈಗೆ ಬರುವ ಮುನ್ನವೇ ಕೊಚ್ಚಿ ಹೋಗಿದೆ. ಇದನ್ನು ಜನಪ್ರತಿನಿಧಿಗಳು ಬಂದು ನೋಡ್ಬೇಕು. ಸುಮಾರು 20-25 ವರ್ಷಗಳಿಂದ ಇದೇ ರೀತಿ ತೋಟಗಳು ಜಲಾವೃತವಾಗುತ್ತಿದೆ" ಎಂದರು.ಇದನ್ನೂ ಓದಿ: ಧಾರವಾಡ, ದಾವಣಗೆರೆಯಲ್ಲಿ ಧಾರಾಕಾರ ಮಳೆ: 50ಕ್ಕೂ ಹೆಚ್ಚು ಮನೆಗಳಿಗೆ ಜಲದಿಗ್ಬಂಧನ
Be the first to comment