ಮೈಸೂರು : ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಲ್ಲೂರಪ್ಪನ ಬೆಟ್ಟದ ಬಳಿಯ ಮಾದಹಳ್ಳಿಯ ಜೋಳದ ಹೊಲದಲ್ಲಿ ಪತ್ತೆಯಾದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಂರಕ್ಷಿಸಿ, ನಾಗರಹೊಳೆ ರಾಷ್ಟ್ರಿಯ ಉದ್ಯಾನವನಕ್ಕೆ ಸೋಮವಾರ ಬಿಟ್ಟಿದ್ದಾರೆ. ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ಕಾಡಂಚಿನ ಪ್ರದೇಶದಲ್ಲಿರುವ ತಮ್ಮ ಹೊಲದಲ್ಲಿ ಹೆಬ್ಬಾವು ಕಂಡೊಡನೆ ರೈತ ಮುನಿಕುಮಾರ್ ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ವೀರನಹೊಸಹಳ್ಳಿ ವನ್ಯಜೀವಿ ವಲಯದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ಬಲೆಯಲ್ಲಿ ಬಂಧಿಸಿದ್ದಾರೆ. ನಂತರ ಅದನ್ನು ನಾಗರಹೊಳೆ ಉದ್ಯಾನಕ್ಕೆ ಸಾಗಿಸಿದ್ದಾರೆ. ಈ ಕುರಿತು ವೀರನಹೊಸಹಳ್ಳಿ ಆರ್ಎಫ್ಒ ವಿನೋದ್ ಗೌಡ ಅವರು ಮಾತನಾಡಿದ್ದು, ''ಇಲ್ಲಿಯವರೆಗೂ ಈ ಭಾಗದಲ್ಲಿ ಇಷ್ಟೊಂದು ಬೃಹತ್ ಗಾತ್ರದ ಹಾವನ್ನು ನಾವು ಕಂಡಿರಲಿಲ್ಲ. ಹನ್ನೆರಡುವರೆ ಅಡಿ ಉದ್ದ, 50 ಕೆ.ಜಿ. ತೂಕದ ಸುಮಾರು 8-10 ವರ್ಷ ಪ್ರಾಯದ ಈ ಹೆಣ್ಣು ಹೆಬ್ಬಾವು ಆರೋಗ್ಯಯುತವಾಗಿದೆ'' ಎಂದು ತಿಳಿಸಿದ್ದಾರೆ.ಕೆಲ ದಿನಗಳ ಹಿಂದೆ ಹೆಚ್. ಡಿ. ಕೋಟೆಯ ಗಿರಿಜನ ಆಶ್ರಮ ಶಾಲೆಯ ಬಳಿಯೇ ಹೆಬ್ಬಾವೊಂದು ಕಾಣಿಸಿಕೊಂಡಿತ್ತು.ಇದನ್ನೂ ಓದಿ : ಕಚ್ಚಿದ ಹಾವು ವಿಷಪೂರಿತವೇ? ಎರಡೇ ನಿಮಿಷದಲ್ಲಿ ರಿಪೋರ್ಟ್ ನೀಡುತ್ತೆ ಈ ಕಿಟ್!
Be the first to comment