ಬೆಳ್ತಂಗಡಿ(ದಕ್ಷಿಣ ಕನ್ನಡ): ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನದಿಂದ ಭಾರಿ ಮಳೆಯಾಗುತ್ತಿದೆ. ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ರಸ್ತೆಬದಿ ನಿಲ್ಲಿಸಿದ್ದ ಕಾರು ನೆರೆಯಲ್ಲಿ ಸಿಲುಕಿ ಕೊಚ್ಚಿ ಹೋಗುವುದನ್ನು ತಡೆಯಲು ಸ್ಥಳೀಯರು ಹಗ್ಗದಿಂದ ಮರಕ್ಕೆ ಕಟ್ಟಿದ್ದಾರೆ.ಶಿಶಿಲ ದೇವಸ್ಥಾನ ಜಲಾವೃತವಾಗಿದೆ. ಮಂಗಳವಾರ ಸಂಜೆಯಿಂದ ಎಡೆಬಿಡದೆ ಮಳೆಯಾಗುತ್ತಿದ್ದು ನೇತ್ರಾವತಿ, ಮೃತ್ಯುಂಜಯ, ಕಪಿಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ದಿಡುಪೆ, ಕಡಿರುದ್ಯಾವರ, ಚಾರ್ಮಾಡಿ ಭಾಗದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚಾರವಿದ್ದು, ಗುಡ್ಡ ಕುಸಿಯುವ ಭೀತಿ ಇದೆ.ಅಮೈ ಸೇತುವೆ ಮುಳುಗಡೆ: ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಹಾಗೂ ಕೊಂಬಾರು ಗ್ರಾಮದಲ್ಲಿ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನದಿಂದ ವ್ಯಾಪಕ ಮಳೆಯಾಗುತ್ತಿದ್ದು ಸುಬ್ರಹ್ಮಣ್ಯ- ಉಡುಪಿ ರಾಜ್ಯ ಹೆದ್ದಾರಿ 37ರ ಕೋಟೆ ಹೊಳೆ ಸೇತುವೆ ಹಾಗೂ ಗುಂಡ್ಯ-ಕುಲ್ಕುಂದ ರಾಜ್ಯ ಹೆದ್ದಾರಿ 114ರ ಅಮೈ ಸೇತುವೆ ಮುಳುದಿವೆ.ಪ್ರವಾಹದಲ್ಲಿ ಸೇತುವೆಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ವಾಹನ ಸಂಚಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಸಾರ್ವಜನಿಕರು ಈ ಮಾರ್ಗಗಳನ್ನು ಬಳಸದೆ ಬೇರೆ ಮಾರ್ಗಗಳನ್ನು ಬಳಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಸಾರ್ವಜನಿಕರ ಸುರಕ್ಷತೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ಎಚ್ಚರಿಕೆ ವಹಿಸಲು ಮನವಿ ಮಾಡಲಾಗಿದೆ.ಇದನ್ನೂ ಓದಿ: ಮತ್ತೆ ಮುಂಗಾರು ಮಳೆ ಚುರುಕು: 11 ಜಿಲ್ಲೆಗಳಿಗೆ ಆರೆಂಜ್, 15 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ