ಚಾಮರಾಜನಗರ : ಹನೂರು ತಾಲೂಕಿನ ಕಾಂಚಳ್ಳಿ ಸಮೀಪದ ಜಮೀನೊಂದರಲ್ಲಿ ಎರಡು ಚಿರತೆ ಮರಿಗಳು ಮಂಗಳವಾರ ಪ್ರತ್ಯಕ್ಷವಾಗಿವೆ. ಇದರಿಂದಾಗಿ ರೈತರು ಹೌಹಾರಿದ್ದಾರೆ. ಬಸಪ್ಪನ ದೊಡ್ಡಿ ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ರೈತರು ಎರಡು ಚಿರತೆ ಮರಿಗಳು ಕಂಡು ಹೆದರಿದ್ದಾರೆ. ಚಿರತೆ ಮರಿಗಳು ಪತ್ತೆಯಾದ ಮಾಹಿತಿ ತಿಳಿದು ತಕ್ಷಣ ಹನೂರು ಬಫರ್ ಅರಣ್ಯ ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಿಗಳನ್ನು ಅದರ ತಾಯಿ ಚಿರತೆಯೊಂದಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ವೇಳೆ, ರೈತರು ಅದರ ತಾಯಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಗುಂಡಾಪುರ, ಬಸಪ್ಪನ ದೊಡ್ಡಿ, ಗಂಗನ ದೊಡ್ಡಿ ಈ ಭಾಗದಲ್ಲಿ ಈ ಹಿಂದೆಯೂ ಚಿರತೆ ಹಾವಳಿ ಹೆಚ್ಚಾಗಿತ್ತು. ಕುರಿ, ಮೇಕೆ ಹಾಗೂ ನಾಯಿ ಸೇರಿದಂತೆ ಸಾಕುಪ್ರಾಣಿಗಳನ್ನ ಬಲಿ ಪಡೆದ ನಿದರ್ಶನವೂ ಇದೆ. ಈ ಪ್ರದೇಶಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರಿಂದಾಗಿ ಕರ್ನಾಟಕ ರಾಜ್ಯ ರೈತ ಸಂಘವು ಅದನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರಿಂದಾಗಿ ಸ್ಥಳದಲ್ಲಿ ಬೋನನ್ನೂ ಸಹ ಅಳವಡಿಸಲಾಗಿತ್ತು. ದುರಾದೃಷ್ಟವಶಾತ್ ಚಿರತೆ ಸಿಕ್ಕಿರಲಿಲ್ಲ. ಇದೀಗ ಮತ್ತೆ ಚಿರತೆ ಮರಿಗಳು ಕಂಡುಬಂದಿರುವುದರಿಂದಾಗಿ ಈ ಭಾಗದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.ಇದನ್ನೂ ಓದಿ : ದಾವಣಗೆರೆ: ಕಾಡು ಹಂದಿಗಳ ಸೆರೆಗೆ ಹಾಕಿದ್ದ ಬಲೆಗೆ ಬಿದ್ದ ಚಿರತೆಮರಿ; ಅರಣ್ಯ ಸಿಬ್ಬಂದಿಯಿಂದ ರಕ್ಷಣೆ - LEOPARD TRAPPED
Be the first to comment