ಚಾಮರಾಜನಗರ: ಎಲ್ಲಿ ನೋಡಿದರಲ್ಲಿ ಜನಸಾಗರ, ಉಘೇ, ಉಘೇ ಮಾದಪ್ಪ ಎಂಬ ಜಯಘೋಷ, ಕುಣಿದು ಕುಪ್ಪಳಿಸಿ ಭಕ್ತಿ ಪರಾಕಾಷ್ಠೆ ಮೆರೆದ ಭಕ್ತರು.. ಈ ದೃಶ್ಯಗಳು ಇಂದು ಮಲೆ ಮಹದೇಶ್ವರ ಸ್ವಾಮಿಯ ದೀಪಾವಳಿ ರಥೋತ್ಸವದಲ್ಲಿ ಕಂಡುಬಂತು.ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸ್ಥಳ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯಿಂದ ದೀಪಾವಳಿ ಮಹಾ ರಥೋತ್ಸವ ಜರುಗಿತು. ಕ್ಷೇತ್ರದಲ್ಲಿ ಕಳೆದ 18ರಂದು ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು, ಇಂದು ರಥೋತ್ಸವದ ಮೂಲಕ ಸಂಪನ್ನಗೊಂಡಿತು. ಜಾತ್ರೆಯ ಪ್ರಯುಕ್ತ ಬೆಟ್ಟಕ್ಕೆ ಸಹಸ್ರಾರು ಭಕ್ತರು ವಿವಿಧ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲೇ ಆಗಮಿಸಿದ್ದರು. ಪ್ರಾಧಿಕಾರ ಕೂಡ ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಿತ್ತು.ಕಳೆದ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ 5 ಲಕ್ಷಕ್ಕೂ ಹೆಚ್ಚು ಲಾಡು ಮಾರಾಟವಾಗಿತ್ತು. ಈ ಬಾರಿ ಇನ್ನೂ ಹೆಚ್ಚು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದುದರಿಂದ ಜಾತ್ರೋತ್ಸವಕ್ಕೂ ಮುನ್ನವೇ 4 ಲಕ್ಷ ಲಾಡು ತಯಾರಿಸಿ ದಾಸ್ತಾನಿರಿಸಲಾಗಿತ್ತು.ಜಾತ್ರೋತ್ಸವಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ 350 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಶಕ್ತಿ ಯೋಜನೆ ಬಳಸಿಕೊಂಡ ಮಹಿಳೆಯರು ಮಾದಪ್ಪನ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದರು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಓರ್ವ ಡಿವೈಎಸ್ಪಿ, ಆರು ಮಂದಿ ಇನ್‌ಸ್ಪೆಕ್ಟರ್, 17 ಸಬ್ ಇನ್‌ಸ್ಪೆಕ್ಟರ್, 35 ಎಎಸ್ಐ , 45 ಮಹಿಳಾ ಕಾನ್ಸ್‌ಟೇಬಲ್‌ಗಳು, 300 ಪೊಲೀಸ್ ಕಾನ್ಸ್‌ಟೇಬಲ್‌ಗಳು, 400 ಗೃಹ ರಕ್ಷಕ ದಳದ ಸಿಬ್ಬಂದಿ , 2 ಡಿಆರ್, 2 ಕೆಎಸ್‌ಆರ್‌ಪಿ ತುಕಡಿ, ಹಾಗೂ ಎನ್‌ಎಸ್‌ಎಸ್, ಎನ್ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು.ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಮಹಾರಥ ಮುನ್ನಡೆಸುವುದು ಈ ಯುವತಿಯರೇ: ಇದು ವಂಶಪಾರಂಪರ್ಯವಾಗಿ ಬಂದ ಸಂಪ್ರದಾಯ!
Be the first to comment