ಧಾರವಾಡ: ಅತಿಯಾದ ಮುಂಗಾರು ಮಳೆಯಿಂದ ಬೆಳೆ ಹಾನಿ ಒಂದೆಡೆಯಾದರೆ, ಮೋಡ ಕವಿದ ವಾತಾವರಣ ಸೇರಿದಂತೆ ಕೀಟಗಳ ಕಾಟದಿಂದ ಸಹ ಫಸಲು ಹಾನಿಗೊಳಗಾಗಿದೆ. ಪರಿಣಾಮ ಕಾಯಿ ಬಿಡದ ಸೋಯಾ ಬೆಳೆಯನ್ನು ಕೆಲವು ರೈತರು ಕಿತ್ತು ಹಾಕುತ್ತಿದ್ದ ದೃಶ್ಯ ಕಂಡು ಬಂದಿದೆ. ನೋಡಲು ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಸೋಯಾ ಬೆಳೆಯಲ್ಲಿ ಕಾಯಿ ಬಿಟ್ಟಿಲ್ಲ. ಧಾರವಾಡ ತಾಲೂಕಿನ ಲೋಕೂರ ಗ್ರಾಮದ ಸುತ್ತಮುತ್ತಲಿನ ಹಲವು ರೈತರ ಸೋಯಾ ಬೆಳೆ ಬೆಳೆದಿದ್ದು, ಕಾಯಿ ಬಿಡದ ಹಿನ್ನೆಲೆಯಲ್ಲಿ ಕಿತ್ತು ಹಾಕುತ್ತಿದ್ದಾರೆ. ಹವಾಮಾನ ವೈಪರೀತ್ಯವೋ, ಕೀಟಬಾಧೆಯೋ ಅಥವಾ ಬೀಜದ ಸಮಸ್ಯೆಯೋ ಗೊತ್ತಿಲ್ಲ. ಗ್ರಾಮದ ರೈತನೋರ್ವ 10 ಎಕರೆ ಸೋಯಾಬಿನ್ ಬೆಳೆದಿದ್ದು, ಇದೀಗ ಸಂಕಷ್ಟ ಎದುರಿಸುವಂತಾಗಿದೆ.ಸೋಯಾ ಬೆಳೆ ಏನೋ ಸೊಂಪಾಗಿ ಬೆಳೆದಿದೆ. ಆದರೆ, ಕಾಯಿ ಬಿಟ್ಟಿಲ್ಲ. ಇಡೀ ಸೋಯಾಬಿನ್ ಬೆಳೆ ಕಿತ್ತು ಹಾಕಿ ಬೇರೆ ಬೆಳೆ ಹಾಕದೇ ಬೇರೆ ಮಾರ್ಗವಿಲ್ಲ. ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಸಾಕಷ್ಟು ಖರ್ಚು ಮಾಡಲಾಗಿದೆ. ಬೆಳೆ ಸೊಂಪಾಗಿದ್ದರೂ ಗಿಡದಲ್ಲಿ ಒಂದು ಕಾಯಿ ಕೂಡ ಇಲ್ಲ. ಹೀಗಾಗಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ಕಿತ್ತು ಹಾಕುವಂತಹ ಪರಿಸ್ಥಿತಿ ಬಂದೊಂದಿಗೆ ಎನ್ನುತ್ತಿದ್ದಾರೆ ಸ್ಥಳೀಯ ರೈತರು.''ಧಾರವಾಡ ಜಿಲ್ಲೆಯಲ್ಲಿ ಸೋಯಾ ಬೆಳೆ ಭಾಗಶಃ ಹಾನಿಯಾಗಿದೆ. ಪ್ರತಿ ಎಕರೆಗೆ ಸುಮಾರು 20 ಸಾವಿರ ರೂಪಾಯಿ ಖರ್ಚು ಮಾಡಿ ಬಿತ್ತಲಾಗಿತ್ತು. ಆದರೆ, ಸೋಯಾ ಗಿಡದಲ್ಲಿ ಈ ಬಾರಿ ಒಂದು ಕಾಯಿ ಕೂಡ ಕಾಣುತ್ತಿಲ್ಲ. ಎಲ್ಲವನ್ನು ಕಿತ್ತು ಹಾಕಬೇಕಾದ ಪರಿಸ್ಥಿತಿ ಇದೆ. ಖರ್ಚು ಮಾಡಿ ಬೆಳೆ ಹಾಕಿದ್ದೆವು. ಆದರೆ, ಈಗ ಖರ್ಚು ಮಾಡಿ ಅದನ್ನು ಕಿತ್ತು ಹಾಕಬೇಕಾಗಿದೆ'' ಎಂದು ರೈತ ಚಂದ್ರು ಎನ್ನುವವರು ಅಳಲು ತೋಡಿಕೊಂಡರು.''ಧಾರವಾಡ ಜಿಲ್ಲೆಯ ಪ್ರತಿಯೊಬ್ಬ ರೈತನ ಹೊಲದಲ್ಲಿಯೂ ಇಂತಹ ಪರಿಸ್ಥಿತಿ ಇದೆ. ಗಿಡದಲ್ಲಿ ಒಂದು ಸೋಯಾ ಕಾಯಿ ಕೂಡ ಇಲ್ಲ. ಹೂವು ಸಹ ಬಿಟ್ಟಿಲ್ಲ. ಒಂದಲ್ಲ, ಎರಡಲ್ಲ, ಐದಾರು ಬಾರಿ ಔಷಧ ಸಿಂಪಡಣೆ ಮಾಡಲಾಗಿದೆ. ಒಂದೊಂದು ಎಕರೆಗೆ ಸರಿಸುಮಾರು 25 ಸಾವಿರ ಖರ್ಚು ಮಾಡಲಾಗಿದೆ. 50-60 ಸಾವಿರ ರೂಪಾಯಿ ಇದರಿಂದ ಆದಾಯ ಬರುವ ನಿರೀಕ್ಷೆ ಇತ್ತು. ಈ ಬಾಧೆಯಿಂದ ಪ್ರತಿ ಎಕರೆಗೆ ಲೆಕ್ಕ ಹಾಕಿದರೂ 10 ಎಕರೆಗೆ ಸುಮಾರು 8-10 ಲಕ್ಷ ರೂಪಾಯಿ ನಷ್ಟವಾಗಿದೆ. ಈಗ ಅದನ್ನು ಕೀಳಲು ಸಹ ಪ್ರತಿ ಕೆಲಸಗಾರನಿಗೆ 300 ರೂಪಾಯಿ ಕೊಡಬೇಕು. ಇಲ್ಲಿಯೂ ನಷ್ಟ. ಸಾಲ-ಸೂಲ ಮಾಡಿ ಸೋಯಾ ಹಾಕಲಾಗಿತ್ತು. ಯಾವ ಕಾರಣದಿಂದ ಹೀಗೆ ಆಗಿದೆ ಗೊತ್ತಿಲ್ಲ. ಕೀಟಬಾಧೆಯೋ ಅಥವಾ ಬೀಜದ ಸಮಸ್ಯೆಯೋ ಅದು ಕೂಡ ಗೊತ್ತಿಲ್ಲ. ನಮ್ಮ ಗೋಳನ್ನು ಕೃಷಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ'' ಎನ್ನುತ್ತಾರೆ ರೈತ ಸಹದೇವ.ಇದನ್ನೂ ಓದಿ: ಇದೇ ಮೊದಲ ಬಾರಿ ಸೋಯಾಬಿನ್ ಬೆಳೆಗೆ ಹೊಸ ಕೀಟಬಾಧೆ: ಬೆಳೆ ನಾಶಕ್ಕೆ ಮುಂದಾದ ರೈತರು, ಕೃಷಿ ಅಧಿಕಾರಿಗಳ ಸಲಹೆ ಏನು? - SOYBEAN CROP DESTRUCTION
Be the first to comment