ಶಿವಮೊಗ್ಗ: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳ ಜೀವನಾಡಿಯಾದ ಭದ್ರಾ ಜಲಾಶಯ ಭರ್ತಿಯಾಗುವ ಮುನ್ನವೇ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಿಂದ 1,200 ಕ್ಯೂಸೆಕ್ ನೀರನ್ನು ನದಿಗೆ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ಸುಮಾರು ಮೂರು ಅಡಿಯಷ್ಟು ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯವು 186 ಅಡಿ ಗರಿಷ್ಟ ಎತ್ತರ ಹೊಂದಿದೆ. ಇಂದಿನ ನೀರಿನ ಮಟ್ಟ 174.4 ಅಡಿ ಇದೆ. ಮಳೆಗಾಲ ಇನ್ನೂ ಇದೆ. ಕಳೆದ ವರ್ಷ ಆ.1ರಂದು ನೀರು ಬಿಡುಗಡೆ ಮಾಡಲಾಗಿತ್ತು. ಈ ಸಲ ಜು. 11ಕ್ಕೆ ನೀರು ಬಿಡುಗಡೆ ಮಾಡಲಾಗಿದ್ದು, ಭರ್ತಿ ಮುನ್ನ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಒಳ ಹರಿವು ಹೆಚ್ಚಳವಾಗಿದ್ದು, ವಿದ್ಯುತ್ ಉತ್ಪಾದನೆಗಾಗಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಎಡದಂಡೆ ಕಾಲುವೆ ದುರಸ್ತಿ ಹಾಗೂ ಬಲದಂಡೆ ಕಾಲುವೆಯ ಗೇಟ್ ದುರಸ್ತಿ ಹಿನ್ನೆಲೆ ನೀರು ಬಿಡುಗಡೆ ಮಾಡದ ಕಾರಣ ನೇರವಾಗಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕೆ: ಇನ್ನೂ ಮಳೆಗಾಲ ಸುಮಾರು ಎರಡು ತಿಂಗಳು ಇದೆ. ಅಲ್ಲದೆ ಈ ಬಾರಿ ಅವಧಿಗೂ ಮುನ್ನವೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಕಳೆದ ಸಲಕ್ಕಿಂತ ಈ ಸಲ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಿದೆ. ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ಒಟ್ಟಿಗೆ ನೀರು ಬಿಟ್ಟರೆ, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಬಹುದು. ಈ ಕಾರಣದಿಂದ ಸರ್ಕಾರ ಈಗಿನಿಂಲೇ ಕಡಿಮೆ ಪ್ರಮಾಣದ ನೀರು ಬಿಡುಗಡೆಗೆ ಸೂಚನೆ ನೀಡಿದೆ. ಹಾಗಾಗಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಮುಖ್ಯ ಎಂಜಿನಿಯರ್ ಸತೀಶ್ ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಭರ್ತಿ: ಹಿಡಕಲ್ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - HIDKAL DAM WATER
Be the first to comment