ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಲಿದೆ. ಜೂನ್ 22ರಿಂದ ಆರಂಭವಾದ ಆಷಾಢ ಜುಲೈ 20ರಂದು ಅಂತ್ಯವಾಗಲಿದ್ದು ಹಬ್ಬಗಳ ಮಾಸ ಶ್ರಾವಣ ಜುಲೈ 21ರಿಂದ ಶುರುವಾಗಲಿದೆ. ಶ್ರಾವಣ ಮಾಸದ ಮೊದಲ ಹಬ್ಬ ಹಾಗೂ ಅದರಲ್ಲೂ ದೇವಿಗೆ ಅರ್ಪಿತವಾದ ಹಬ್ಬ ಮಂಗಳ ಗೌರಿ ವ್ರತ. ಗೌರಿ ದೇವಿಯು ಮನೆಯವರಿಗೆ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ವೈವಾಹಿಕ ಜೀವನ ಆನಂದದಿಂದ ಇರುವಂತೆ ಆಶೀರ್ವದಿಸುವ ಉದ್ದೇಶದಿಂದ ಈ ಪೂಜೆಯನ್ನು ಪಾರ್ವತಿ ಅಥವಾ ಗೌರಿ ದೇವಿಗೆ ಪೂಜೆಯನ್ನು ಸಮರ್ಪಿಸಲಾಗುತ್ತದೆ. ಮದುವೆಯಾದ ಮೊದಲ ಐದು ವರ್ಷಗಳಲ್ಲಿ ಮಹಿಳೆಯರು ಈ ವ್ರತವನ್ನು ಮಾಡುತ್ತಾರೆ. ಮುತ್ತೈದೆಯರು ದೀರ್ಘ ಸುಮಂಗಲಿಯ ಆಶೀರ್ವಾದಕ್ಕಾಗಿ, ಸಂತಾನ ಭಾಗ್ಯ ಪಡೆಯಲು, ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಾಡಿದರೆ, ಹೆಣ್ಣುಮಕ್ಕಳು ಉತ್ತಮ ಬಾಳ ಸಂಗಾತಿಗಾಗಿ ಬೇಡಿಕೆ ಇಟ್ಟು ಬಹಳ ಭಕ್ತಿ ಭಾವದಿಂದ ಆಚರಿಸುವ ಈ ವ್ರತವನ್ನು ಪಾರ್ವತಿ ದೇವಿಗೆ ಅರ್ಪಿಸುತ್ತಾರೆ. ಈ ವ್ರತ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹಿಂದೂಗಳು ಆಚರಿಸುವ ಪ್ರಮುಖ ವ್ರತ. ಶ್ರಾವಣ ಮಾಸದ ಯಾವುದೇ ಮಂಗಳವಾರವೂ ಮಂಗಳಗೌರಿ ವ್ರತ ಆಚರಿಸಬಹುದು.
Be the first to comment