Siddaramaih attack on BJP

  • 2 years ago
ಬಿಜೆಪಿ ಅಭಿವೃದ್ಧಿ, ಸಾಧನೆಗಳ ಹೆಸರಿನಲ್ಲಿ ಗೆಲ್ಲುವುದು ಅಸಾಧ್ಯ: ಸಿದ್ದು

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯ ಪಾಲನೆ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಪಕ್ಷದಿಂದ ತಲಾ ಒಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ, ಐದು ಜನ ಹಿಂದುಳಿದ ವರ್ಗದ, ಮಹಿಳಾ ಅಭ್ಯರ್ಥಿ, ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾತಾಡಿದ ಅವರು, ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿ ಮೊದಲ ಬಾರಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ, ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರು. ಅದನ್ನು ವಿರೋಧಿಸಿದ್ದು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ್ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಿರೋಧಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿದ್ದರಿಂದ ಇಂದು ಮೀಸಲಾತಿ ಸೌಲಭ್ಯ ಉಳಿದಿದೆ. ಇವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಐದು ವರ್ಷಗಳಿಗೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಕಡ್ಡಾಯವಾಗಿ ಚುನಾವಣೆ ನಡೆಯುವಂತೆ ಕಾನೂನು ತಂದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ. ಬಿಜೆಪಿ ಸರ್ಕಾರ ಸೋಲಿನ ಭಯದಿಂದ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮುಂದೂಡಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಿರ್ಧಾರದಿಂದಾಗಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡಲು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅವಕಾಶವೇ ಇಲ್ಲದಂತಾಗಿದೆ. ಸರ್ಕಾರ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ. ಇವೆಲ್ಲವನ್ನೂ ಹಾಳುಗೆಡಹುತ್ತಿರುವುದೇ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಎಂದರು.

ಬಿಜೆಪಿ ಆಡಳಿತದಲ್ಲಿ ಬಡ ರೈತ ಇನ್ನಷ್ಟು ಬಡವನಾಗುತ್ತಿದ್ದಾನೆ, ಅದಾನಿ, ಅಂಬಾನಿಯಂತವರ ಆಸ್ತಿ ದುಪ್ಪಟ್ಟಾಗುತ್ತಿದೆ. ಬಡವರ ಉಚಿತ ಅಕ್ಕಿಯ ಪ್ರಮಾಣ ಕಡಿಮೆ ಮಾಡುತ್ತಾರೆ, ರೈತರ ಸಾಲ ಮನ್ನಾ ಮಾಡಲ್ಲ, ಉದ್ಯಮಿಗಳ ಸಾಲ ಮನ್ನಾ ಮಾಡಿ, ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡ್ತಾರೆ. ಹಾಗಾದರೆ ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು.
2019ರ ಅತಿವೃಷ್ಟಿಗೆ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ. ನಾನು ಬೆಳಗಾವಿಗೆ ಹೋಗಿದ್ದಾಗ ಮನೆ, ಬೆಳೆ ಕಳೆದುಕೊಂಡಿದ್ದ ನೂರಾರು ಮಹಿಳೆಯರು ಬಂದು ಸರ್ಕಾರದಿಂದ ಪೈಸೆ ಪರಿಹಾರ ಸಿಕ್ಕಿಲ್ಲ, ದಯವಿಟ್ಟು ನೀವೇ ಏನಾದ್ರೂ ಮಾಡಬೇಕು ಎಂದು ಮನವಿ ಮಾಡಿದ್ರು. ಇನ್ನೆಷ್ಟು ವರ್ಷ ಕಳೆದಮೇಲೆ ಅವರಿಗೆ ಸರ್ಕಾರ ಪರಿಹಾರ ಕೊಡೋದು? ಎಂದು ಪ್ರಶ್ನಿಸಿದರು.

ಕೊರೊನಾ ರೋಗಿಗಳಿಗೆ ಸರ್ಕಾರ ಆಸ್ಪತ್ರೆ, ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿಲ್ಲ, ಸತ್ತವರಿಗೆ ಪರಿಹಾರ ನೀಡಿಲ್ಲ, ಸತ್ತವರ ಸಂಖ್ಯೆಯಲ್ಲೂ ಸುಳ್ಳು ಹೇಳಿದ್ರು, ಔಷಧಿ, ವೆಂಟಿಲೇಟರ್, ಮಾಸ್ಕ್ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದರು. ಇಂತಹಾ ನಿರ್ಲಜ್ಜ, ಭ್ರಷ್ಟ ಸರ್ಕಾರ ತೊಲಗಿದಾಗಲೆ ಜನರಿಗೆ ನೆಮ್ಮದಿ ಎಂದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಅಧಿಕಾರಿಯ ವರ್ಗಾವಣೆಯೂ ಸಾಧ್ಯವಿಲ್ಲ. ಕಡತಗಳು ಇರುವ ಜಾಗದಿಂದ ಅಲ್ಲಾಡಲ್ಲ, ಅಭಿವೃದ್ಧಿ ಕೆಲಸಗಳು ಮುಂದಕ್ಕೆ ಸಾಗಲ್ಲ. ಇದು ಲಂಚ, ಲಂಚ, ಬರೀ ಲಂಚಕೋರರ ಸರ್ಕಾರ ಎಂದರು.

ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಕೊರೊನಾ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ಹೆಚ್ಚುವರಿ ವೇತನ ಕೊಟ್ಟಿಲ್ಲ, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕೊಟ್ಟಿಲ್ಲ. ಇದೇ ಸರ್ಕಾರ ಮುಂದುವರೆದರೆ ಮುಂದೆ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕೊಡೋಕು ಹಣವಿರಲ್ಲ ಎಂದರು.

Recommended