INTERVIEW WITH KAMEGOWDA WHO BUILT TANKS BY HIS OWB MONEY

  • 4 years ago
Interviewed by Vijay Angadi

ಕೆರೆಕಟ್ಟೆಗಳನ್ನು ಕಟ್ಟಿದ ಕಾಮೇಗೌಡರು
-ಬರಹ: ಡಾ. ವಿಜಯ್ ಅಂಗಡಿ, ಹಾಸನ 9448996495
ಕುರಿಗಳನ್ನು ಅಕ್ಕರೆಯಿಂದ ಸಾಕಿಕೊಂಡು ಕೆರೆಕಟ್ಟೆಗಳ ನಿರ್ಮಾಣದಲ್ಲಿ ನಿರತರಾಗಿರುವ ಕಾಮೇಗೌಡರಿಗೆ ವಯಸ್ಸು 86. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಈ ವ್ಯಕ್ತಿಯನ್ನು ಜೂನ್ ತಿಂಗಳ 28ರಂದು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್‍ಕಿ ಬಾತ್ (ಮನದಾಳದ ಮಾತು) ಕಾರ್ಯಕ್ರಮದಲ್ಲಿ ಉಲ್ಲೇಖಿಸಿದರು. ಈ ಹಿನ್ನಲೆಯಲ್ಲಿ ಕಾಮೇಗೌಡರ ಕಾಯಕ ಕುರಿತು ಅವರೊಂದಿಗೆ ಈಚೆಗೆ ನಾವು ಮಾತನಾಡಿದೆವು.
ಏನೂ ಓದದ ಕಾಮೇಗೌಡರು ಕಾಡಿನ ಅಭಿವೃದ್ಧಿಯಲ್ಲಿ, ಕೆರೆಕಟ್ಟೆಗಳ ನಿರ್ಮಾಣದಲ್ಲಿ ಈಗ್ಗೆ 40 ವರ್ಷಗಳಿಂದ ಭಾಗಿಯಾದವರು. ತಮಗೆ ಅಲ್ಪ ಜಮೀನಿದ್ದರೂ, ವಾಸಕ್ಕೆ ಸರಿಯಾದ ಮನೆ ಇಲ್ಲದಿದ್ದರೂ ಪರಿಸರದ ಒಳಿತಿಗೆ ತಾವು ದುಡಿದ ಹಣದಲ್ಲಿ ಗರಿಷ್ಟ ಪ್ರಮಾಣವನ್ನು ವ್ಯಯ ಮಾಡಿದ್ದಾರೆ. ‘ನಾನು ಟೈಲರಿಂಗ್‍ನಲ್ಲಿ ದುಡಿದ 14 ಲಕ್ಷ ರೂಪಾಯಿ ಹಣ, ಕುರಿಗಳನ್ನು ಮಾರಿದ ಸಾಕಷ್ಟು ದುಡ್ಡನ್ನು ನನ್ನಪ್ಪ 16 ಕೆರೆಕಟ್ಟೆಗಳಿಗೆ ವೆಚ್ಚ ಮಾಡಿದ್ದಾgರೆ’ ಎಂದು ಹಿರಿಯ ಪುತ್ರ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್‍ಕಿ ಬಾತ್ ಕಾರ್ಯಕ್ರಮದಲ್ಲಿ ಜೂನ್ 28ರಂದು ಕಾಮೇಗೌಡರ ಕೆರೆಕಟ್ಟೆಗಳ ನಿರ್ಮಾಣದ ಕಾಳಜಿಯನ್ನು ಉಲ್ಲೇಖಿಸಿದರು. ಈ ಹಿಂದೆ ಮಾಧ್ಯಮಗಳಲ್ಲಿ ಕಾಮೇಗೌಡರ ¨ಗ್ಗೆ ವಿಚಾರಗಳು ಪ್ರಕಟವಾಗಿವೆ. ಪತ್ರಕರ್ತರಾದ ಸುದರ್ಶನ್ ಚನ್ನಂಗಿಹಳ್ಳಿ ಅವರಿಂದ ಕಾಮೇಗೌಡರ ಸಂಪರ್ಕಕ್ಕೆ ಸಂಖ್ಯೆಯನ್ನು ಪಡೆದು ದಿನಾಂಕ 09.07.2020 ರಂದು ಆಕಾಶವಾಣಿಗಾಗಿ ರಾತ್ರಿ 8:30ಕ್ಕೆ ಮಾತನಾಡಿದೆ. ಕಾಮೇಗೌಡರು ಕಾಲುನೋವಿನಿಂದ ಬಳಲುತ್ತಿದ್ದರೂ ಪ್ರಾಣಿ, ಪಕ್ಷಿಗಳ ಬಗೆಗಿನ ಕನಿಕರವನ್ನು ಗಟ್ಟಿಯಾಗಿಯೇ ತೋಡಿಕೊಂಡರು.
700 ಕುಟುಂಬಗಳಿರುವ ದಾಸನದೊಡ್ಡಿ ಗ್ರಾಮವು ಮಂಡ್ಯ ಜಿಲ್ಲೆ ಮಳವಳ್ಳಿಯಿಂದ 8 ಕಿ.ಮೀ ದೂರದಲ್ಲಿದೆ ಈ ಊರು. ಪಕ್ಕದಲ್ಲೇ ಅರ್ಧ ಕಿ.ಮೀ ದೂರದಲ್ಲಿ ಕುಂದೂರು ಬೆಟ್ಟ ಇದೆ. ಸುಮಾರು 2000 ಎಕರೆಗೂ ಮೀರಿದ ವಿಸ್ತೀರ್ಣ ಇದರದ್ದು. ಊರಿನ ಜನ ಕುರಿ, ಆಡು, ಜಾನುವಾರುಗಳನ್ನು ಮೇಯಿಸಲು ಈ ಬೆಟ್ಟವನ್ನು ಆಶ್ರಯಿಸಿದ್ದಾರೆ. ಈ ಮೊದಲು ಅಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರೇ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಕಾಮೇಗೌಡರು ತಮ್ಮ ಶ್ರಮದಿಂದ ಸಣ್ಣದೊಂದು ಗುಂಡಿಯನ್ನು ತೆಗೆದರು. ಮಳೆಯ ನೀರು ಇಂಗಿಕೊಂಡು ಅಲ್ಲಿ ಬಂದು ಸೇರಿತು. ಕಾಮೇಗೌಡರು ಕೆರೆಕಟ್ಟೆಗಳನ್ನು ನಿರ್ಮಿಸಲು ಶುರುಮಾಡಿಕೊಂಡರು. ಬೆಂಗಳೂರಿನಲ್ಲಿ ಹೊಲಿಗೆ ವೃತ್ತಿ ಮಾಡುತ್ತಿದ್ದ ಮಗ ಕೃಷ್ಣ ಅವರ ಉಳಿತಾಯದ ಬಹಳಷ್ಟು ಹಣವನ್ನು ಕೆರೆಕಟ್ಟೆಗಳಿಗೆ ಕಾಮೇಗೌಡರು ವಿನಿಯೋಗಿಸಿದ್ದಾರೆ. ಹಾಗೆಯೇ ಆಗಾಗ್ಗೆ ಮಾರಾಟ ಮಾಡಿದ ಕುರಿಗಳ ಕಾಸನ್ನೂ ಬಳಸಿಕೊಂಡಿದ್ದಾರೆ.
ಅರಣ್ಯ ಇಲಾಖೆಯವರು ಬೆಚ್ಚಿ ಬೀಳುವಂತೆ ಕಾಮೇಗೌಡರು ತಮ್ಮ ಕಾಯಕದಲ್ಲಿ ಸಾಗಿ ಬಂದಿದ್ದಾರೆ. ಜನ, ಜಾನುವಾರು, ಪ್ರಾಣಿ, ಪಕ್ಷಿಗಳ ಹಿತವನ್ನೇ ಬಯಸಿ ಕಾಮೇಗೌಡರು ಮೂರು ಕಿ.ಮೀ ವ್ಯಾಪ್ತಿಯಲ್ಲಿ ನೀರಿನ ಸೆಲೆ, ಲಭಿಸುವ ಜಾಗವನ್ನು ನೋಡಿಕೊಂಡು 16 ಕೆರೆಕಟ್ಟೆಗಳನ್ನು ಕಟ್ಟಲು 40 ವರ್ಷಗಳ ಕಾಲ ನಿರಂತರವಾಗಿ ಶ್ರಮ ಪಟ್ಟಿದ್ದಾರೆ. ಹಾಗೆಯೇ ಕುಂದೂರು ಬೆಟ್ಟದ ಹಸೀರೀಕರಣದಲ್ಲಿ ಭಾಗಿಯಾಗಿದ್ದಾರೆ. 5 ಗುಂಟೆಯಿಂದ 20 ಗುಂಟೆ ವಿಸ್ತೀರ್ಣದಲ್ಲಿರುವ ಈ ಕೆರೆಕಟ್ಟೆಗಳ ಆಳವು 15 ರಿಂದ 25 ಅಡಿ ಇದೆ. ಇವರ ಈ ಪ್ರಯತ್ನದಿಂದ ಅಲ್ಲಿಯ ಅಂತರ್ಜಲವು ಚನ್ನಾಗಿದೆ. ರೈತರ ಬದುಕು ಉತ್ತಮವಾಗಿರಲು ನೆರವಾಗಿದೆ. ಕಾಮೇಗೌಡರಿಗೆ ಈಗ 86 ವರ್ಷ,
ಕೆಲಸಗಳಿಗೆ ದೇಹ ಸಹಕರಿಸುತ್ತಿಲ್ಲ. ಚಿಕ್ಕಂದಿನಿಂದಲೂ ಅಪ್ಪನೊಂದಿಗೆ ಪಳಗಿರುವ ಹಿರಿಯ ಮಗ ಕೃಷ್ಣ ಅವರ ಕೆಲಸ ಮತ್ತು ಕಾಳಜಿಯನ್ನು ಕಾಪಾಡಲು ತೊಡಗಿಸಿಕೊಂಡಿದ್ದಾರೆ. ಸಂಪರ್ಕಕ್ಕೆ – 9880999132, 6363055564

Recommended