ಬೆಂಗಳೂರು, ಜನವರಿ 26 : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನಿರ್ಧಾರವೊಂದು ವಿವಾದಕ್ಕೆ ಕಾರಣವಾಗಿದೆ. ಕೋಮು ಗಲಭೆಯಲ್ಲಿ ಭಾಗಿಯಾದ ಅಲ್ಪ ಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೋಮುಗಲಭೆಯಲ್ಲಿ ಭಾಗಿಯಾದ ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ನೀಡಲು ಸರ್ಕಾರ ನಿರ್ಧರಿಸಿದ್ದು, ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಅಭಿಯೋಜನೆಯಿಂದ ಕೇಸುಗಳನ್ನು ವಾಪಸ್ ಪಡೆಯಲು ಕೋರಿ ಪತ್ರ ಬರೆಯಲಾಗಿದೆ
ಗೃಹ ಸಚಿವರ ಸಮರ್ಥನೆ : ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. 'ಮಹದಾಯಿ, ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆ' ಎಂದು ಹೇಳಿದರು. 'ಟಿಪ್ಪು ಜಯಂತಿ ವೇಳೆ ಹಲವು ಕಡೆ ಪರ-ವಿರೋಧ ಪ್ರತಿಭಟನೆಗಳು ನಡೆದಿವೆ. ಆಸ್ತಿ ಹಾನಿ, ಕೊಲೆ ಯತ್ನ ಪ್ರಕರಣಗಳನ್ನು ನಾವು ವಾಪಸ್ ಪಡೆಯುತ್ತಿಲ್ಲ' ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದರು.